Saturday, October 11, 2025

ಬಂದರಿನಲ್ಲಿ ಮೀನುಗಾರಿಕಾ ಬೋಟ್‌ ಮುಳುಗಡೆ: ಲಕ್ಷಾಂತರ ರೂ. ಹಾನಿ

ಹೊಸದಿಗಂತ ವರದಿ ಅಂಕೋಲಾ:

ತಾಲೂಕಿನ ಬೆಲೇಕೇರಿ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕೆ ಬೋಟ್ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ.

ಬೆಲೇಕೇರಿಯ ಸರಸ್ವತಿ ಅಶೋಕ ಕುಡ್ತಲಕರ್ ಎನ್ನುವವರ ಮಾಲಿಕತ್ವದ ಶ್ರೀಶಾರದಾಂಬಾ ಹೆಸರಿನ ಪರ್ಸೀನ್ ಬೋಟ್ ಮುಳುಗಡೆಯಾಗಿದ್ದು ಕ್ರೇನುಗಳನ್ನು ಬಳಸಿ ಬೋಟನ್ನು ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದೆ.
ರಾತ್ರಿ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದು ಬೆಲೇಕೇರಿ
ಮೀನುಗಾರಿಕೆ ಬಂದರಿನಲ್ಲಿ ಸೂಕ್ತ ಅಲೆ ತಡೆಗೋಡೆ ವ್ಯವಸ್ಥೆ ಇಲ್ಲದ ಕಾರಣ ಪದೇ ಪದೇ ಬೋಟುಗಳಿಗೆ
ಹಾನಿಯುಂಟಾಗುತ್ತಿದ್ದು ಮೀನುಗಾರರು ಬೋಟುಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆ ಬಂದರಿನಲ್ಲಿ ಅಲೆ ತಡೆಗೋಡೆ ಕಾಮಗಾರಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಅನುಮೋದನೆ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಇತ್ತೀಚೆಗೆ ಮೀನುಗಾರಿಕಾ ಇಲಾಖೆಯ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ತಡೆಗೋಡೆ ಇಲ್ಲದ ಕಾರಣದಿಂದಾಗಿ ಬಂದರಿನ ದಕ್ಕೆಯಲ್ಲಿ ಲಂಗರು ಹಾಕಿದ ಬೋಟು ಸಂಪೂರ್ಣ ಮುಳುಗಡೆಯಾಗಿದೆ.

ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ
ಭೇಟಿ ನೀಡಿದ್ದು ಹಾನಿ ಕುರಿತಂತೆ ನಿಖರವಾದ ಮಾಹಿತಿ ಲಭ್ಯವಾಗಬೇಕಿದೆ.

error: Content is protected !!