ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯದ ಕಾರಣದಿಂದ ಕ್ರಿಕೆಟ್ ಮೈದಾನದಿಂದ ದೂರವಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತೆ ಆಟಕ್ಕೆ ಮರಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅಯ್ಯರ್, ಹೊಟ್ಟೆಗೆ ಆದ ಗಾಯದ ಹಿನ್ನೆಲೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಕಳೆದುಕೊಂಡಿದ್ದರು. ಅವರ ವಾಪಸಿಗಾಗಿ ಕಾದಿದ್ದ ಅಭಿಮಾನಿಗಳಿಗೆ ಇದೀಗ ಸಂತಸದ ಸುದ್ದಿ ಲಭಿಸಿದೆ.
ಬಿಸಿಸಿಐ ಶ್ರೇಯಸ್ ಅಯ್ಯರ್‌ಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಅಧಿಕೃತ ಅನುಮತಿ ನೀಡಿದೆ. ಡಿಸೆಂಬರ್ 25ರಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಫಿಟ್ನೆಸ್ ಮೌಲ್ಯಮಾಪನದಲ್ಲಿ ಅಯ್ಯರ್ ಯಶಸ್ವಿಯಾಗಿ ಪಾಸ್ ಆಗಿದ್ದಾರೆ. ಮುಂದಿನ ಸರಣಿಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಡಿಸೆಂಬರ್ 30ರವರೆಗೆ ಅವರು ಬೆಂಗಳೂರಿನಲ್ಲೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಏಕದಿನ ತಂಡ ಸೇರುವ ಮೊದಲು ಶ್ರೇಯಸ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ. ಜನವರಿ 2ರಂದು ಜೈಪುರದಲ್ಲಿ ತಂಡವನ್ನು ಸೇರಿಕೊಳ್ಳಲಿರುವ ಅವರು, ಜನವರಿ 3ರಂದು ಮಹಾರಾಷ್ಟ್ರ ಮತ್ತು ಜನವರಿ 6ರಂದು ಹಿಮಾಚಲ ಪ್ರದೇಶ ವಿರುದ್ಧ ಕಣಕ್ಕಿಳಿಯಬಹುದು. ಜನವರಿ 8ರಂದು ಪಂಜಾಬ್ ವಿರುದ್ಧದ ಪಂದ್ಯ ಬಿಟ್ಟು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾಗೆ ಸೇರುವ ಸಾಧ್ಯತೆ ಹೆಚ್ಚಿದೆ.

