Thursday, November 27, 2025

ಬೆಂಗಳೂರಲ್ಲಿ ಬಯಲಾಯ್ತು ವಿದೇಶಿ ಡ್ರಗ್ಸ್ ಜಾಲ; ಎಂಡಿಎಂಎ ಕ್ರಿಸ್ಟಲ್, ಹೈಡ್ರೋಗಾಂಜಾ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬಿಗ್ ಶಾಕ್ ನೀಡಿದೆ. ಕೇವಲ ಎರಡು ಕಾರ್ಯಾಚರಣೆಗಳಲ್ಲಿ ಅಂದಾಜು ₹ 5.5 ಕೋಟಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾ ಪ್ರಜೆಗಳ ಬಂಧನ, ಎಂಡಿಎಂಎ ಜಪ್ತಿ

ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಮಾದಕ ದ್ರವ್ಯ ನಿಗ್ರಹ ದಳದ ಪಿಐ ವಿ.ಡಿ.ಶಿವರಾಜು ಮತ್ತು ಸಿಬ್ಬಂದಿ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ, ಇಬ್ಬರು ನೈಜೀರಿಯಾ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹ 2.5 ಕೋಟಿ ಮೌಲ್ಯದ 1.047 ಕೆ.ಜಿ. ತೂಕದ ಎಂಡಿಎಂಎ ಕ್ರಿಸ್ಟಲ್ ಮತ್ತು ₹ 42,800 ನಗದನ್ನು ಜಪ್ತಿ ಮಾಡಲಾಗಿದೆ. ತನಿಖೆ ವೇಳೆ, ಆರೋಪಿಗಳು ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದರೂ, ಡ್ರಗ್ ಪೆಡ್ಲಿಂಗ್‌ನಲ್ಲಿ ಸಕ್ರಿಯವಾಗಿ ತೊಡಗಿದ್ದರು ಎಂಬುದು ಬಯಲಾಗಿದೆ.

ಪಾರ್ಸೆಲ್‌ಗಳಲ್ಲಿ ಹೈಡ್ರೋಗಾಂಜಾ: ಮರೆಮಾಚುವ ಹೊಸ ತಂತ್ರ

ಇನ್ನೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಕೆ.ಜಿ. ನಗರ ಠಾಣಾ ವ್ಯಾಪ್ತಿಯ ಅಂಚೆ ಕಚೇರಿಗೆ ವಿದೇಶದಿಂದ ಅನುಮಾನಾಸ್ಪದ ಪಾರ್ಸೆಲ್‌ಗಳು ಬಂದಿರುವ ಬಗ್ಗೆ ಮಾಹಿತಿ ಪಡೆದ ಮಾದಕ ದ್ರವ್ಯ ನಿಗ್ರಹ ದಳದ ಪಿಐ ರಕ್ಷಿತ್ ಮತ್ತು ತಂಡ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಂದಾಜು ₹ 3 ಕೋಟಿ ಮೌಲ್ಯದ 3 ಕೆ.ಜಿ. ತೂಕದ ಹೈಡ್ರೋಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರಗ್ಸ್ ಜಾಲದ ಹೊಸ ಕಾರ್ಯವೈಖರಿಯನ್ನು ಇಲ್ಲಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆರೋಪಿಗಳು ವಿದೇಶಿ ಕಂಪನಿಗಳ ಬಿಸ್ಕತ್ ಮತ್ತು ಚಾಕೊಲೇಟ್ ಪ್ಯಾಕೇಟ್‌ಗಳಲ್ಲಿ ಡ್ರಗ್ಸ್ ಅನ್ನು ಅಡಗಿಸಿ, ಥೈಲ್ಯಾಂಡ್ ಮತ್ತು ಫ್ರಾನ್ಸ್‌ನಂತಹ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಈ ಎರಡೂ ಪ್ರಕರಣಗಳ ಸಂಬಂಧ ಹೆಬ್ಬಗೋಡಿ ಮತ್ತು ಕೆ.ಜಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆ ಕಾರ್ಯವನ್ನು ಸಿಸಿಬಿ ಮುಂದುವರೆಸಿದೆ.

error: Content is protected !!