Saturday, October 4, 2025

ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಡಿ.ಕೆ. ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಾಲದಲ್ಲಿ ಕಾಡಾಗಿದ್ದ ಪ್ರದೇಶಗಳೆಲ್ಲವೂ ಈಗ ನಾಡಾಗಿ ಮಾರ್ಪಟ್ಟಿವೆ. ಆದರೆ ಮುಂದಿನ ಪೀಳಿಗೆಗಾಗಿ ಪರಿಸರ ಮತ್ತು ಅರಣ್ಯಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಅರಣ್ಯ ಇಲಾಖೆಯಿಂದ ಆಯೋಜಿಸಲಾದ ವನ್ಯಜೀವಿ ಸಪ್ತಾಹದ ಅಂಗವಾಗಿ ವಿಧಾನಸೌಧದಿಂದ ಲಾಲ್‌ಬಾಗ್ ವರೆಗೆ ನಡೆದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಅವರು, ಕರ್ನಾಟಕವು ಅರಣ್ಯ ಮತ್ತು ಪ್ರಕೃತಿ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ನಮ್ಮ ಹಿರಿಯರು ಪ್ರಕೃತಿಯನ್ನು ದೇವರಂತೆ ಪೂಜಿಸುತ್ತಿದ್ದರು. ಈಗ ನಾವೂ ಅದೇ ಪರಂಪರೆಯನ್ನು ಮುಂದುವರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲೆಗಳು ಒಂದೊಂದು ವಲಯವನ್ನು ಆಯ್ಕೆಮಾಡಿ ವಿದ್ಯಾರ್ಥಿಗಳಿಂದ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಕೈಗೊಂಡಿರುವುದನ್ನು ಉಲ್ಲೇಖಿಸಿದರು. ಕಳೆದ ಎರಡು ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಸಂರಕ್ಷಿಸಲಾಗಿದೆ. ಈ ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಮತ್ತು ವನ್ಯಜೀವಿ ರಾಯಭಾರಿ ಹಾಗೂ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.