Saturday, December 27, 2025

ತುಮುಲ್ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ಮುಖಂಡ ಹಳೇಮನೆ ಶಿವನಂಜಪ್ಪ ವಿಧಿವಶ

ಹೊಸದಿಗಂತ ತುಮಕೂರು:

ಹಿರಿಯ ಸಹಕಾರಿ ಮುಖಂಡರು ಹಾಗೂ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪ (79) ಅವರು ಶನಿವಾರ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಮೃತರು ಅಪಾರ ಬಂಧು-ಬಳಗ, ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಗಣ್ಯರನ್ನು ಅಗಲಿದ್ದಾರೆ.

ತುಮುಲ್ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಶಿವನಂಜಪ್ಪ ಅವರು, ಒಕ್ಕೂಟವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತರ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸಿದ್ದ ಅವರು, ಹೈನುಗಾರಿಕೆಯನ್ನು ಕೇವಲ ಉಪಕಸುಬನ್ನಾಗಿ ಮಾಡದೆ ಲಾಭದಾಯಕ ಉದ್ಯಮವನ್ನಾಗಿ ರೂಪಿಸಿದ್ದರು. ಜಿಲ್ಲೆಯ ಹಲವು ಸಹಕಾರಿ ಸಂಸ್ಥೆಗಳಿಗೆ ಅವರು ಮಾರ್ಗದರ್ಶಕರಾಗಿದ್ದರು.

ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬದ ಮೂಲಗಳ ಪ್ರಕಾರ, ನಾಳೆ (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

error: Content is protected !!