ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ದಂಪತಿಗಳಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮನೆಯಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಕೆತ್ತಲಾಗಿರುವ ಗಣಪತಿ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿರುವ ಅರುಣ್ ಯೋಗಿರಾಜ್ ಅವರಿಂದಲೇ ವಿಗ್ರಹ ಕೆತ್ತಿಸಬೇಕೆಂದು ಅಲಿಯಾ ಭಟ್ ಕುಟುಂಬ ನಿರ್ಧರಿಸಿತ್ತು. ಅಂತೆಯೇ ಅರುಣ್ ಯೋಗಿರಾಜ್ ಅವರನ್ನು ಮುಂಬೈಗೆ ಕರೆಸಿಕೊಂಡು ಮಾಹಿತಿ ನೀಡಿದ್ದರು. ಅದರಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಸ್ಟಾರ್ ದಂಪತಿಯ ಮನೆಯ ವಾತಾವರಣ ನೋಡಿ, ಅಲ್ಲಿಗೆ ಸೂಕ್ತ ಎನಿಸುವ ಗಣಪತಿ ವಿಗ್ರಹ ಕೆತ್ತಿದ್ದಾರೆ.
ಮುಂಬೈನ ಆಲಿಯಾ ಭಟ್ ಅವರ ಮನೆಗಾಗಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಎರಡೂವರೆ ಅಡಿಯಳ್ಳ ಪೀಠ ಸೇರಿದಂತೆ 6.50 ಅಡಿ ಎತ್ತರ ಗಣಪತಿ ಮೂರ್ತಿಯನ್ನು ಕೆತ್ತಿದ್ದಾರೆ. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಪೀಠದ ಮೇಲೆ ಕುಳಿತಿರುವ ಗಣಪತಿ ವಿಗ್ರಹ ಇದಾಗಿದೆ.

ಕಳೆದ ಆರು ತಿಂಗಳಿಂದ ಕೃಷ್ಣಶಿಲೆಯಲ್ಲಿ ಗಣಪತಿ ವಿಗ್ರಹ ಹಾಗೂ ಒಡಿಸ್ಸಾದಿಂದ ತರಿಸಿದ ಕಲ್ಲಿನಿಂದ ಪೀಠ ಕೆತ್ತನೆ ಮಾಡಲಾಗಿದೆ. ಅ.18 ರಂದು ಆಲಿಯಾ ಭಟ್ ಕುಟುಂಬಸ್ಥರು ಗಣಪತಿ ಪೂಜೆ ಮಾಡಲು ದಿನಾಂಕ ನಿಗದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅ.16ರಂದು ಮೈಸೂರಿನಿಂದ ಮುಂಬೈಗೆ ಗಣಪತಿ ವಿಗ್ರಹವನ್ನು ಸಾಗಿಸಲಾಗುತ್ತಿದೆ.

