ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲೇ ಹುಟ್ಟಿ ಬೆಳೆದ ಯುವರಾಜ ಹೆಸರಿನ ಜಿರಾಫೆಯ 25ನೇ ವರ್ಷದ ಹುಟ್ಟುಹಬ್ಬವನ್ನು ಗುರುವಾರ ಅಧಿಕಾರಿಗಳು ಮತ್ತು ಸಿಬ್ಬಂದಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ಯುವರಾಜನಿಗೆ ಇಷ್ಟವಾದ ಹುಲ್ಲು, ವಿವಿಧ ಕಾಳು ಹಾಗೂ ಹಣ್ಣುಗಳಿಂದ ಸಿಬ್ಬಂದಿ ವಿಶೇಷ ಕೇಕ್ ತಯಾರಿಸಿದ್ದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಅನುಷಾ ಹಾಗೂ ಸಿಬ್ಬಂದಿ ಯುವರಾಜನಿಗೆ ಜನ್ಮದಿನದ ಶುಭಾಶಯ ಕೋರಿ ವಿಶೇಷ ಕೇಕ್ ತಿನ್ನಿಸಿದರು.
ನಮ್ಮ ಮೃಗಾಲಯದಲ್ಲಿ ಒಟ್ಟು 10 ಜಿರಾಫೆಗಳಿವೆ. ಮೃಗಾಲಯದಲ್ಲೇ ಹುಟ್ಟಿ ಬೆಳೆದ ಯುವರಾಜ ಜಿರಾಫೆಯೇ ಹಿರಿಯ ಸದಸ್ಯ. ಕಾಡಿನಲ್ಲಿರುವ ಜಿರಾಫೆಗಳು ಸಾಮಾನ್ಯವಾಗಿ 10ರಿಂದ 15 ವರ್ಷ ಬದುಕುತ್ತವೆ. ಆದರೆ, ಮೃಗಾಲಯದ ಸಿಬ್ಬಂದಿಯ ಆರೈಕೆ, ಪಾಲನೆಯಿಂದಾಗಿ ಯುವರಾಜ 25 ವರ್ಷ ಪೂರೈಸಿದ್ದಾನೆ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು ಎಂದು ಪಿ.ಅನುಷಾ ತಿಳಿಸಿದರು.

