Sunday, January 11, 2026

ಮಹಡಿಯಿಂದ ಬಿದ್ದು ಬಾಲಕಿ ಸಾವು: ಇದು ಆಕಸ್ಮಿಕ ಅಲ್ಲ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ ಟೆರಸ್‌ಗೆ ಕರೆದೊಯ್ದು ಮೂರನೇ ಮಹಡಿಯಿಂದ ಮಲತಾಯಿ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.

7 ವರ್ಷದ ಸಾನ್ವಿ ಮೃತ ಬಾಲಕಿ ಹಾಗೂ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆ.27ರಂದು ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದೊಯ್ದು ಅಲ್ಲಿಂದ ತಳ್ಳಿ ಮಲತಾಯಿ ಕೊಲೆ ಮಾಡಿದ್ದಳು. ಆ ದಿನ ಎಲ್ಲರೂ ಸಾನ್ವಿ ಆಯತಪ್ಪಿ ಬಿದ್ದಳು ಎಂದು ನಂಬಿದ್ದರು. ಆ.28ರಂದು ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ದೂರು ನೀಡಿದ್ದರು.

ಸೆ.12ರಂದು ಮೃತ ಬಾಲಕಿ ತಂದೆ ಸಿದ್ಧಾಂತಗೆ ಪಕ್ಕದ ಮನೆಯವರು ವಿಡಿಯೋವೊಂದನ್ನು ಕಳುಹಿಸಿದ್ದರು. ವಿಡಿಯೋದಲ್ಲಿ ಬಾಲಕಿ ಸಾವನ್ನಪ್ಪಿದ ದಿನ ಆಕೆಯ ಜೊತೆ ಮಲತಾಯಿ ರಾಧಾ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದೆ.

ಈ ಸಿಸಿಟಿವಿ ದೃಶ್ಯ ನೋಡಿದಾಗ ವಿಷಯ ಬಹಿರಂಗವಾಗಿದ್ದು, ವಿಡಿಯೋ ಆಧರಿಸಿ ಬಾಲಕಿಯ ಅಜ್ಜಿ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು.
ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾಗಿದ್ದು, ಅವರಿಗೆ ಎರಡು ಅವಳಿ ಮಕ್ಕಳಿವೆ. ಹೀಗಾಗಿ ಸಿದ್ಧಾಂತನ ಮೊದಲ ಮಗುವನ್ನು ಎರಡನೇ ಪತ್ನಿ ರಾಧಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ಆಸ್ತಿ ಇಬ್ಭಾಗ ಆಗುತ್ತದೆ ಎಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!