ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `K47′ (ಕಿಚ್ಚ 47) ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ ಸಿನಿಮಾಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ.
ಕಿಚ್ಚ ಸುದೀಪ್ ಈ ವರ್ಷ ತಾವು ಅಂದುಕೊಂಡಂತೆ ಒಂದು ಸಿನಿಮಾವನ್ನ ತಮ್ಮ ಅಭಿಮಾನಿಗಳಿಗೆ ನೀಡುತ್ತಿದ್ದಾರೆ . ಕಳೆದ ವರ್ಷ ಡಿಸೆಂಬರ್ 25ರಂದು ತೆರೆಕಂಡ ಮ್ಯಾಕ್ಸ್ ಸಿನಿಮಾ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು.
ಡಿಸೆಂಬರ್‌ಗೆ ಸುದೀಪ್ ಅವರ ಹೊಸ ಚಿತ್ರ ತೆರೆಗೆ ಬರಲಿದ್ದು, ʻಮಾರ್ಕ್ʼ (MARK) ಅಂತ ಹೆಸರಿಡಲಾಗಿದೆ. ಮ್ಯಾಕ್ಸ್ ಚಿತ್ರತಂಡದ ಜೊತೆಗಿನ 2ನೇ ಸಿನಿಮಾ ಇದಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರಲಿದೆ. ಹೊಸ ಚಿತ್ರದ ಟೈಟಲ್ ಟೀಸರ್ ಕೂಡ ರಿಲೀಸ್ ಆಗಿದ್ದು, ಖದರ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
https://www.youtube.com/watch?v=Brh1_cfyi_E&t=110s
‘ಮಾರ್ಕ್’ ಸಿನಿಮಾದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಹೊಂದಿದ್ದಾರೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಇದು ಸುದೀಪ್ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಚಿತ್ರತಂಡ ಹೇಳಿದೆ. ಟೈಟಲ್ ಟೀಸರ್ ನೋಡಿದ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಮೊದಲು ‘ಮ್ಯಾಕ್ಸ್’ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು. ಆ ಕಾರಣದಿಂದಲೂ ನಿರೀಕ್ಷೆ ಜೋರಾಗಿದೆ.
ಈ ಸಿನಿಮಾಗೆ ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ತಂಡದಲ್ಲಿ ಅನುಭವಿ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶೇಖರ್ ಚಂದ್ರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.