ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಟಿಕೆಟ್ ದರ ಆಕಾಶಕ್ಕೇರಿದ ಪರಿಣಾಮ ಸಾಮಾನ್ಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದರು. ಪರಭಾಷಾ ಸಿನಿಮಾಗಳಿಗೆ 500ರಿಂದ 1000 ರೂಪಾಯಿ ತನಕ ಟಿಕೆಟ್ ದರ ನಿಗದಿಯಾದ ಉದಾಹರಣೆಗಳೂ ಕಂಡುಬಂದವು. ಈ ಪರಿಸ್ಥಿತಿಗೆ ಕಡಿವಾಣ ಹಾಕಲು ಸರ್ಕಾರವು ಏಕರೂಪ ಟಿಕೆಟ್ ದರವನ್ನು ಜಾರಿಗೆ ತರಲು ನಿರ್ಧರಿಸಿದ್ದು, ಸೆಪ್ಟೆಂಬರ್ 12ರಿಂದ ಹೊಸ ಆದೇಶ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ, ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯ ಟಿಕೆಟ್ ದರವು 200 ರೂಪಾಯಿಗಿಂತ ಹೆಚ್ಚಾಗಲು ಅವಕಾಶವಿಲ್ಲ. ತೆರಿಗೆ ಸೇರಿ ಅಂತಿಮ ದರವು 236 ರೂಪಾಯಿಯಾಗಲಿದೆ. ಈ ಕ್ರಮದಿಂದ ಸಿನಿಮಾ ನೋಡುವ ಆಸೆಯಿದ್ದರೂ ದುಬಾರಿ ಟಿಕೆಟ್ ದರದ ಕಾರಣದಿಂದ ಹಿಂದೆ ಸರಿಯುತ್ತಿದ್ದ ಪ್ರೇಕ್ಷಕರಿಗೆ ನಿಟ್ಟುಸಿರು ಸಿಕ್ಕಂತಾಗಿದೆ.
ಆದರೆ ಕೆಲವು ಷರತ್ತುಗಳನ್ನು ಸರ್ಕಾರ ಸ್ಪಷ್ಟಪಡಿಸಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ ಗೋಲ್ಡ್ ಕ್ಲಾಸ್ ಆಸನಗಳಿಗೆ 200 ರೂಪಾಯಿ ಮಿತಿ ಅನ್ವಯವಾಗುವುದಿಲ್ಲ. ಇವುಗಳಿಗೆ ಚಿತ್ರಮಂದಿರಗಳು ತಮ್ಮಿಷ್ಟದಂತೆ ದರ ನಿಗದಿ ಮಾಡಬಹುದು. ಆದರೆ ಸಾಮಾನ್ಯ ಹಾಗೂ ರಿಕ್ಲೈನ್ ಸೀಟ್‌ಗಳಿಗೆ ನಿಗದಿತ ದರವೇ ಅನ್ವಯವಾಗುತ್ತದೆ.
ಹೊಸ ಆದೇಶದ ಪ್ರತಿ ಚಿತ್ರಮಂದಿರಗಳಿಗೆ ತಲುಪಿದ ಬಳಿಕ ನಿಯಮ ಸಂಪೂರ್ಣ ಜಾರಿಗೆ ಬರಲಿದೆ. ಸರ್ಕಾರದ ಈ ಕ್ರಮದಿಂದ ಟಿಕೆಟ್ ದರದಲ್ಲಿ ಏಕರೂಪತೆ ಬಂದು, ಜನರು ಮತ್ತೊಮ್ಮೆ ಸಿನಿಮಾ ಮಂದಿರಗಳತ್ತ ಆಕರ್ಷಿತರಾಗುವ ನಿರೀಕ್ಷೆ ವ್ಯಕ್ತವಾಗಿದೆ.