Wednesday, September 17, 2025

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಒಂದು ದಿನ ಮೊದಲೇ ಕಾವೇರಿ ನೀರು ಪೂರೈಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಜನತೆಗೆ ಕುಡಿಯಲು ಕಾವೇರಿ ನೀರು ಪೂರೈಕೆ ಮಾಡುವ ಎಲ್ಲ ಹಂತದ ಯಂತ್ರಾಗಾರಗಳಲ್ಲಿ ತುರ್ತು ಕಾಮಗಾರಿಗಳ ಕಾರಣ 3 ದಿನಗಳ ಕಾಲ (ಸೆ.15ರಿಂದ ಸೆ.17ರವರೆಗೆ) ಸ್ಥಗಿತಗೊಂಡಿದ್ದ ಕಾವೇರಿ ನೀರು ಪೂರೈಕೆಯು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಪುನರಾರಂಭಗೊಂಡಿದೆ.

ಕಾವೇರಿ ನೀರಿನ ಪೂರೈಕೆಯ ವಿವಿಧ ಹಂತಗಳ ನಿರ್ವಹಣಾ ಕಾಮಗಾರಿಗಳನ್ನು ಸೆಪ್ಟೆಂಬರ್ 17ರವರೆಗೆ ನಿಗದಿಪಡಿಸಲಾಗಿತ್ತು. ಅಂದರೆ ಸೆ.18ರ ಬೆಳಗ್ಗೆಯಿಂದ ನೀರು ಬಿಡುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ಅವರ ಮಾರ್ಗದರ್ಶನದಲ್ಲಿ ಸಿನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 17ರ ಬೆಳಿಗ್ಗೆಯಿಂದಲೇ ನಗರಕ್ಕೆ ನೀರು ಸರಬರಾಜು ಮಾಡಲು ಪ್ರಾರಂಭಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷರು, ‘ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ನಮ್ಮ ಸಿಬ್ಬಂದಿ ಅವಿರತವಾಗಿ ಕೆಲಸ ಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ ನಿರ್ವಹಣಾ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ನೀರು ಪೂರೈಕೆಯನ್ನು ಪುನರಾರಂಭಿಸಲು ಸಾಧ್ಯವಾಗಿದೆ. ಸಾರ್ವಜನಿಕರು ನಮ್ಮ ಪ್ರಯತ್ನಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು. ಈ ಕ್ಷಿಪ್ರ ನಿರ್ವಹಣಾ ಕಾರ್ಯದಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಎದುರಾಗಬಹುದಾಗಿದ್ದ ನೀರಿನ ಕೊರತೆ ನಿವಾರಣೆಯಾಗಿದ್ದು, ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ