Wednesday, September 24, 2025

ಸರಕಾರದ ಸಿನಿಮಾ ಟಿಕೆಟ್ ಏಕರೂಪ ದರ ಜಾರಿಗೆ ತಡೆ: ಬೆಂಗಳೂರಿನಲ್ಲಿ ಗಗನಕ್ಕೆ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ.ಈ ಬೆನ್ನಲ್ಲೇ ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ನಾಳೆ ಬಿಡುಗಡೆ ಆಗಲಿದ್ದು, ಬೆಂಗಳೂರಿನಲ್ಲಿ ಟಿಕೆಟ್ ದರವನ್ನು ಏರಿಸಲಾಗಿದೆ.

‘ಓಜಿ’ ಸಿನಿಮಾದ ಟಿಕೆಟ್ ದರ ಬೆಂಗಳೂರಿನಲ್ಲಂತೂ ಗಗನಕ್ಕೆ ಮುಟ್ಟಿದೆ. ಇಂದು (ಸೆಪ್ಟೆಂಬರ್ 24) ಹಲವೆಡೆ ಪ್ರೀಮಿಯರ್ ಶೋಗಳನ್ನು ಇರಿಸಲಾಗಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಬಹಳ ಹೆಚ್ಚಿವೆ. ಪ್ರೀಮಿಯರ್ ಶೋ ಮಲ್ಟಿಪ್ಲೆಕ್ಸ್​​ಗಳಲ್ಲಿ 750 ರಿಂದ 900 ವರೆಗೆ ಇದೆ. ಅದರಲ್ಲೂ ಬುಕ್​​ಮೈಶೋ ನಲ್ಲಿ ಬುಕ್ ಮಾಡಿದರೆ ಪ್ರತಿ ಟಿಕೆಟ್​​ಗೆ ಸುಮಾರು 50 ರೂಪಾಯಿ ಹೆಚ್ಚುವರಿ ದರ ನೀಡಬೇಕಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್ ದರ ಕಡಿಮೆ ಏನಿಲ್ಲ. ಅಲ್ಲೂ ಸಹ 500 ರೂಪಾಯಿ ಪ್ರತಿ ಟಿಕೆಟ್​ಗೆ ಬೆಲೆ ನಿಗದಿ ಪಡಿಸಲಾಗಿದೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಕಡೆಗಳಲ್ಲಿಯೂ ಸಹ ವಿಶೇಷವಾಗಿ ತೆಲುಗು ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದು, ಅಲ್ಲಿಯೂ ಸಹ ಭಾರಿ ಟಿಕೆಟ್ ದರವನ್ನೇ ಇರಿಸಲಾಗಿದೆ.

ಇನ್ನು ನಾಳೆಯ (ಸೆಪ್ಟೆಂಬರ್ 25) ಶೋಗಳಿಗೂ ಸಹ ಟಿಕೆಟ್ ದರಗಳು ಕಡಿಮೆ ಏನಿಲ್ಲ. ಬೆಂಗಳೂರಿನಲ್ಲಿ ಗುರುವಾದ ಶೋಗಳಿಗೆ ಟಿಕೆಟ್ ಬೆಲೆ ಸರಾಸರಿ 400 ರೂಪಾಯಿಗಳಿಗಿಂತಲೂ ಹೆಚ್ಚಿದೆ.

ಆದರೆ ನಾಳಿನ ಶೋಗೆ ಬೆಂಗಳೂರಿನ ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ. ಜಿಎಸ್​​ಟಿ ಕಡಿಮೆ ಆಗಿರುವುದರಿಂದ ಟಿಕೆಟ್ ಬೆಲೆಗಳು ಅದರಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ತುಸು ಕಡಿಮೆ ಇದೆ.

ಇದನ್ನೂ ಓದಿ