ಹೊಸ ದಿಗಂತ ವರದಿ, ಹಳಿಯಾಳ :
ಪಟ್ಟಣದ ಮರಾಠಾ ಭವನದ ಸಭಾಭವನದಲ್ಲಿ ಶುಕ್ರವಾರ ಸಭೆ ನಡೆಸಿದ ಕಬ್ಬು ಬೆಳೆಗಾರರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿಯ ಸದಸ್ಯರುಗಳು ಹಳಿಯಾಳ ಕ್ಷೇತ್ರದ ಹಿರಿಯ ಶಾಸಕರ ಅಧ್ಯಕ್ಷತೆಯಲ್ಲಿ ಅಗಸ್ಟ್ 30 ರಂದು ನಡೆದ ಸಭೆಯ ತೀರ್ಮಾನದಂತೆ ನೀಡಿದ್ದ 7 ದಿನದ ಅವಧಿಯ ಗಡುವು ಮುಗಿದರೂ ಇದುವರೆಗೆ ಪ್ಯಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದೇ ಇರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಹಳಿಯಾಳ ತಹಶೀಲ್ದಾರ್ ಕಚೇರಿಗೆ ತೆರಳಿ ಒತ್ತಾಯ ಪಡಿಸುವ ನಿರ್ಣಯ ಕೈಗೊಂಡರು.
ಸಭೆಯ ನಿರ್ಣಯದಂತೆ ಸಭೆಯಲ್ಲಿ ನೆರೆದಿದ್ದ ರೈತ ಮುಖಂಡರುಗಳು ಹಾಗೂ ರೈತ ಸಮೂಹವು ಇನ್ನೂ ಹೆಚ್ಚಿನ ಸಮಯ ಕಾರ್ಖಾನೆಯವರಿಗೆ ನೀಡುತ್ತಾ ಕಾಯಲು ಸಾಧ್ಯವಿಲ್ಲ ಎಂದು ಆಕ್ರೋಶಿತರಾಗಿ ಶಾಸಕರ ಮಾತಿಗೂ ಬೆಲೆ ಕೊಡದೆ ಉದ್ದಟತನವನ್ನು ಮೆರೆಯುತ್ತಿರುವುದನ್ನು ಖಂಡಿಸಿ ಘೊಷಣೆ ಕೂಗುತ್ತಾ ಹಳಿಯಾಳ ತಹಶೀಲ್ದಾರ ಕಚೇರಿಗೆ ನುಗ್ಗಿದರು. ಸೋಮವಾರದೊಳಗೆ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸಭೆ ಕರೆದು ನಿರ್ಣಯ ಕೈಗೊಳ್ಳಲು ಬಿಗಿ ಪಟ್ಟು ಹಿಡಿದು ಸರಿ ಸುಮಾರು ಐದು ತಾಸುಗಳಷ್ಟು ಕಚೇರಿಯಲ್ಲಿಯೇ ಬೀಡು ಬಿಟ್ಟ ಘಟನೆ ಜರುಗಿತು.
ಈ ಸಂದರ್ಭದಲ್ಲಿ ತಹಶೀಲ್ದಾರರವರಿಂದ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ, ಜಿಲ್ಲಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಫಲ ನೀಡದೇ ಇರುವುದು ನೆರೆದಿದ್ದ ರೈತರಲ್ಲಿ ಇನ್ನಷ್ಟು ಆಕ್ರೋಶ ಪುಟಿದೇಳುವಂತಾಯಿತು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ರೈತರುಗಳು ಹಳಿಯಾಳ ತಾಲೂಕು, ಅಳ್ನಾವರ ತಾಲೂಕು, ಕಲಘಟಗಿ ತಾಲೂಕು, ಧಾರವಾಡ ತಾಲೂಕು, ದಾಂಡೇಲಿ ತಾಲೂಕಿನಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೋಬಾಟಿ, ಕಬ್ಬು ಬೆಳೆಗಾರರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಬೆಳಗಾಂವಕರ, ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಎಮ್. ವ್ಹಿ. ಘಾಡಿ, ಭರತೇಶ ಪಾಟೀಲ್, ಪ್ರಕಾಶ ಪಾಕರಿ, ಮಂಜುಳಾ ಗೌಡಾ, ಅಶೋಕ ಮೇಟಿ, ಪರಶುರಾಮ ಎತ್ತಿನಗುಡ್ಡ, ಜಿಲ್ಲಾ ಸಮಿತಿಯ ಉಳವಪ್ಪ,ವಸಂತ ಧಾಕಪ್ಪನವರ, ರಾಮದಾಸ ಬೆಳಗಾಂವಕರ ಮುಂತಾದ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.