ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಾಸನ ದುರಂತ ಬಳಿಕ ನಿನ್ನೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದ ಹೆಚ್.ಡಿ ದೇವೇಗೌಡ ಅವರು ಇಂದು ಮೃತರ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸುವಂತೆ ಸರ್ಕಾರಕ್ಕೆ ಆಗ್ರಹ ಕೂಡ ಮಾಡಿದ್ದಾರೆ.
ಶನಿವಾರ ಸಂಜೆ ಹಾಸನಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರು. ವ್ಹೀಲ್‌ಚೇರಲ್ಲೇ ತೆರಳಿ ಹಿಮ್ಸ್‌ಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಹೆಚ್.ಡಿ ದೇವೇಗೌಡರು, ಜೆಡಿಎಸ್ ಪಕ್ಷದ ವತಿಯಿಂದ ಮೃತ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಣೆ ಮಾಡಿದರು. ಪೊಲೀಸರು ಮುಂಜಾಗ್ರತೆ ವಹಿಸಿದ್ದರೇ ಈ ಅನಾಹುತ ತಡೆಯಬಹುದಿತ್ತು ಎಂದರಲ್ಲದೇ ರಾಜ್ಯ ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇಂದು ಮೊಸಳೆಹೊಸಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡದ ಕಾಮಗಾರಿ ವೀಕ್ಷಿಸಿದ ಹೆಚ್‌ಡಿಡಿ ಬಳಿಕ ಟ್ರಕ್ ಹರಿದು ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಶಾಸಕರಾದ ಹೆಚ್.ಡಿ ರೇವಣ್ಣ, ಹೆಚ್.ಪಿ ಸ್ವರೂಪ್‌ಪ್ರಕಾಶ್ ಸಾಥ್ ನೀಡಿದ್ದಾರೆ.
ಹೊಳೆನರಸೀಪುರದ ಬಂಟರಹಳ್ಳಿಯ ಪ್ರಭಾಕರ್, ಮುತ್ತಿಗೆಹಿರೀಹಳ್ಳಿಯ ಗೋಕಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ದೇವೇಗೌಡರು ಮೃತ ಗೋಕಲ್ ತಂಗಿಯ ವಿದ್ಯಾಭ್ಯಾಸ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಗೋಕುಲ್ ತಂಗಿ ನಾಲ್ಕನೇ ತರಗತಿ ಓದುತ್ತಿದ್ದಾಳೆ.