Tuesday, October 21, 2025

Hassan Tragedy | ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿ: ಆರ್.ಅಶೋಕ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರು ಎಲ್ಲರೂ ಹಳ್ಳಿಯವರೇ ಆಗಿರುವ ಕಾರಣ ಸರ್ಕಾರವು ಹೆಚ್ಚಿನ ಪರಿಹಾರವನ್ನು ಘೋಷಿಸಬೇಕೆಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರವು 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಗ್ರಾಮೀಣ ಹಿನ್ನೆಲೆಯ ಕುಟುಂಬಗಳ ಕಷ್ಟವನ್ನು ಮನಗಂಡು, ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡುವುದು ಸೂಕ್ತವೆಂದು ಮನವಿ ಮಾಡಿದರು.

ಅಶೋಕ್ ಅವರು ಹಾಸನಕ್ಕೆ ತೆರಳಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳಿಂದ ವಿವರ ಪಡೆದುಕೊಳ್ಳುವುದಾಗಿ, ಜೊತೆಗೆ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಪ್ರತಿವರ್ಷ ದೊಡ್ಡ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದರು. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿ, ಕೋಮು ಗಲಭೆಗೆ ಕಾರಣವಾಗಲು ಯತ್ನಿಸುತ್ತಾರೆ. ಇಂತಹವರಿಗೆ ಸರ್ಕಾರದಿಂದ ಕಾನೂನು ಕ್ರಮ ಬದಲಾಗಿ ರಿಯಾಯಿತಿ ದೊರಕುತ್ತಿರುವುದು ಅವರಿಗೆ ಕುಮ್ಮಕ್ಕು ನೀಡುತ್ತಿದೆ. ಸರ್ಕಾರ ಇಂತಹ ಅಸಭ್ಯ ಕೃತ್ಯಗಳಿಗೆ ಪಾಠ ಕಲಿಸಬೇಕೆಂದು ಅವರು ಒತ್ತಾಯಿಸಿದರು.

ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ಸಾಂತ್ವನ ನೀಡುವುದೇ ಮುಖ್ಯ ಗುರಿ ಎಂದು ಅಶೋಕ್ ಹೇಳಿದರು. ಪರಿಹಾರವು ಮೃತರನ್ನು ವಾಪಸ್ಸು ತರಲಾರದು, ಆದರೆ ದುಃಖದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆಲೆ ನೀಡಲು ಸಹಾಯ ಮಾಡುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.

error: Content is protected !!