ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ನಿಂದ ಬಳಲುತ್ತಿದ್ದ ದೇವೇಗೌಡರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ದೊಡ್ಡಗೌಡರು ಚೇತರಿಸಿಕೊಂಡಿದ್ದಾರೆ.
ಇತ್ತ ತಂದೆಯನ್ನು ನೋಡಲು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದು, ಸಹೋದರರಾದ ರೇವಣ್ಣ ಹಾಗೂ ಕುಮಾರಸ್ವಾಮಿ ಒಟ್ಟಿಗೆ ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ.
ತಂದೆಯ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈಗ ವೈದ್ಯರ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಅವರಿಗಿದ್ದ ಸಮಸ್ಯೆ ನಿವಾರಿಸಿದ್ದಾರೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯತೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ಒಂದು ಡಿಸ್ಚಾರ್ಜ್ ಆಗಬಹುದು ಎಂದು ಮಾಹಿತಿ ನೀಡಿದರು.
ಅನಾರೋಗ್ಯದ ಹಿನ್ನೆಲೆ ಮಂಗಳವಾರ ರಾತ್ರಿ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡರನ್ನು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಡಾ.ಸುದರ್ಶನ್ ಬಲ್ಲಾಳ್ ಅವರು ದೇವೇಗೌಡರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.