Wednesday, December 10, 2025

ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ HDK ಬಹಿರಂಗ ಕ್ಷಮೆಯಾಚನೆ: ಮುಗಿದ ‘ಕುರ್ಚಿ’ ವಿವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ವಿ.ಸಿ. ಫಾರ್ಮ್‌ನಲ್ಲಿ ನಡೆದ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಈ ಹಿಂದೆ ಸ್ವಾಮೀಜಿಗಳನ್ನು ಉದ್ದೇಶಿಸಿ ಆಡಿದ ಮಾತುಗಳ ಕುರಿತು ವ್ಯಕ್ತವಾದ ಅಸಮಾಧಾನದ ಹಿನ್ನೆಲೆಯಲ್ಲಿ, ತಮ್ಮ ಮತ್ತು ಮಠದೊಂದಿಗಿನ ಸಂಬಂಧವನ್ನು ನೆನೆದು ಹೆಚ್‌ಡಿಕೆ ಭಾವುಕರಾದರು.

ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ನಡೆದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದಾಗ, “ನಾನು ಸ್ವಾಮೀಜಿ ಬೆಂಬಲ ಕೇಳಿರಲಿಲ್ಲ” ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಡಿ.ಕೆ. ಶಿವಕುಮಾರ್, ಶಾಸಕ ಬಾಲಕೃಷ್ಣ ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸ್ವಾಮೀಜಿಗಳು ಅವರದ್ದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಅವರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದೆ,” ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಸ್ಪಷ್ಟಪಡಿಸಿದರು.

ಅಲ್ಲದೆ, ಮಠದೊಂದಿಗಿನ ತಮ್ಮ ಕುಟುಂಬದ ಬಾಂಧವ್ಯವನ್ನು ನೆನಪಿಸಿಕೊಂಡ ಅವರು, ಪರಮಪೂಜ್ಯ ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಗೌರವ ಉಳಿಸಲು ಬೀದಿಗೆ ಬಂದವರು. ಅವರಿಗೆ ದೇವೇಗೌಡರು ಮುಖ್ಯಮಂತ್ರಿಯಾಗಬೇಕು ಎಂಬ ಮನಸ್ಸಿತ್ತು. ನನ್ನ ಮೇಲೂ ಅವರಿಗೆ ವಿಶೇಷ ಪ್ರೀತಿಯಿತ್ತು.

ಈ ಸಂದರ್ಭದಲ್ಲಿ ಮಾತನಾಡುತ್ತಾ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ನಿರ್ಮಲಾನಂದ ಸ್ವಾಮೀಜಿಗಳು ಮಾತನಾಡಿದ ಬಗ್ಗೆ ಮತ್ತು ಅವರಿಗೆ ದೇಶದ ಇತಿಹಾಸದಲ್ಲಿ ಮತ್ತೊಬ್ಬರಿಗೂ ಇಲ್ಲದ ಶಿಕ್ಷಣ ಮತ್ತು ಜ್ಞಾನವಿದೆ ಎಂದು ಹೆಚ್‌ಡಿಕೆ ಉಲ್ಲೇಖಿಸಿದರು. “ಒಂದು ವೇಳೆ ನನ್ನಿಂದ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಯಾವುದೇ ಅಪಚಾರ ಆಗಿದ್ದರೆ, ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಹೇಳುವ ಮೂಲಕ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ತಮ್ಮ ಮಾತುಗಳಿಗೆ ತೆರೆ ಎಳೆದರು.

error: Content is protected !!