ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾನಿಪುರಿ ಅಂಗಡಿಯಲ್ಲಿನಿತ್ಯ ಕೊಡುವುದಕ್ಕಿಂತ 2 ಪಾನಿಪುರಿ ಕಡಿಮೆ ಕೊಟ್ಟಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬಳು ಪಾನಿಪುರಿ ಅಂಗಡಿ ಮುಂದಿರುವ ರಸ್ತೆಯ ಮಧ್ಯದಲ್ಲಿ ಕುಳಿತು ದೊಡ್ಡ ರಂಪಾಟ ಮಾಡಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.
ಗುಜರಾತ್‌ನ ವಡೋದರ ನಗರದಲ್ಲಿ ಈ ವಿಲಕ್ಷಣ ವಿದ್ಯಮಾನ ನಡೆದಿದೆ. ಮಹಿಳೆ, ರಸ್ತೆಬದಿ ಅಂಗಡಿಯಲ್ಲಿ ಗೋಲ್ಗಪ್ಪಾ ತಿನ್ನಲು ಬಂದಿದ್ದಾರೆ. ಇಪ್ಪತ್ತು ರೂಪಾಯಿಯನ್ನು ಅಂಗಡಿಯವನಿಗೆ ಕೊಟ್ಟು, ಗೋಲ್ಗಪ್ಪಾ ಕೊಡಲು ಹೇಳಿದ್ದಾರೆ. ಆತ, ಇಪ್ಪತ್ತು ರೂಪಾಯಿಗೆ ನಾಲ್ಕು ಗೋಲ್‌ಗಪ್ಪಾ ನೀಡಿದ್ದಾನೆ.ಆದರೆ, ಈಕೆಯ ಪ್ರಕಾರ ಇಪ್ಪತ್ತು ರೂಪಾಯಿಗೆ ಆರು ಗೋಲ್ಗಪ್ಪಾ ಬರಬೇಕು. ಆದರೆ, ಅಂಗಡಿಯವನ ಪ್ರಕಾರ, ನಾಲ್ಕೇ. ಇಬ್ಬರ ನಡುವೆ, ಮಾತಿಗೆ ಮಾತು ಬೆಳೆದಿದೆ. ಅಂಗಡಿವನು ಆಕೆಗೆ ಮತ್ತೆ ಎರಡು ಪಾನಿಪುರಿ ನೀಡಲು ಒಪ್ಪಿಲ್ಲ. ಸಿಟ್ಟಿಗೆದ್ದ ಈಕೆ ರಸ್ತೆಯ ಮಧ್ಯದಲ್ಲೇ ಧರಣಿ ಕುಳಿತುಕೊಂಡಿದ್ದಾಳೆ. ವಾಹನಗಳ ಸಂಚಾರ ಇರುವುದರಿಂದ ಮಹಿಳೆಯ ಅಚಾನಕ್ ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಆಗಿದೆ. ಪೊಲೀಸರು ಫುಲ್ ಗೊಂದಲಕ್ಕೀಡಾದರು.
ಅಕಸ್ಮಾತ್ತಾಗಿ ರಸ್ತೆ ಮಧ್ಯೆ ಕುಳಿತ ಮಹಿಳೆಯನ್ನು ನೋಡಲು ಸುತ್ತಮುತ್ತಲಿನ ಜನರು ಗುಂಪಾಗಿ ಸೇರುತ್ತಿದ್ದರು. ಜನರು ಕಾರಣ ವಿಚಾರಿಸಿದಾಗ, ಆಕೆ ಕಣ್ಣೀರಿನಿಂದ ತತ್ತರಿಸಿ ಮಾತನಾಡುತ್ತಾ, ‘ನಾನು 6 ಪಾನೀಪುರಿಗಾಗಿ ಹಣ ಕೊಟ್ಟಿದ್ದೇನೆ, ಆದರೆ ಕೇವಲ 4 ಮಾತ್ರ ಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಘಟನಾ ಸ್ಥಳದಲ್ಲಿ ಜನಸ್ತೋಮ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಸಮಾಧಾನಪಡಿಸಿ ಧರಣಿ ಮುಗಿಸಲು ಮನವೊಲಿಸಿದರು. ನಂತರ ಪರಿಸ್ಥಿತಿ ಶಾಂತಗೊಂಡಿತು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಟ್ವಿಟ್ಟರ್ (X) ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ನೆಟ್ಟಿಗರು ಹಾಸ್ಯಾತ್ಮಕ ಟೀಕೆಗಳ ಜೊತೆಗೆ ಗಂಭೀರ ಚರ್ಚೆಯನ್ನೂ ಪ್ರಾರಂಭಿಸಿದ್ದಾರೆ.