ಆರೋಗ್ಯಕರ ದೇಹದ ಕಾರ್ಯನಿರ್ವಹಣೆಗೆ ಜೀವಸತ್ವಗಳು ಮತ್ತು ಖನಿಜಗಳ ಪಾತ್ರ ಮಹತ್ವದ್ದಾಗಿದೆ. ಅವುಗಳಲ್ಲಿ ವಿಟಮಿನ್ ಕೆ ಪ್ರಮುಖವಾಗಿದ್ದು, ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ, ಮೂಳೆಗಳು ಮತ್ತು ಇತರ ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಬಂಧಿಸಲು ಅಗತ್ಯವಿರುವ ಪ್ರೋಟೀನ್‌ಗಳ ಸಂಶ್ಲೇಷಣೆಗೆ ಅಗತ್ಯವಾದ ಕೊಬ್ಬು ಕರಗುವ ವಿಟಮಿನ್‌ಗಳಾಗಿದ್ದು, ಎರಡು ರೂಪಗಳಲ್ಲಿ ಲಭ್ಯ. ಮೊದಲನೆಯದು ಫಿಲೋಕ್ವಿನೋನ್ (Vitamin K1) ಇದು ಪಾಲಕ್, ಕೊಲಾರ್ಡ್ ಗ್ರೀನ್ಸ್, ಕೇಲ್ ಮೊದಲಾದ ಹಸಿರು ಎಲೆ ತರಕಾರಿಗಳಲ್ಲಿ ಹೆಚ್ಚು. ಎರಡನೆಯದು ಮೆನಾಕ್ವಿನೋನ್ (Vitamin K2) ಇದು ಪ್ರಾಣಿ ಮೂಲದ ಆಹಾರಗಳು, ಹುದುಗಿಸಿದ ಪದಾರ್ಥಗಳು ಮತ್ತು ಮಾನವನ ದೇಹದೊಳಗೆ ಇರುವ ಬ್ಯಾಕ್ಟೀರಿಯಾಗಳಿಂದ ಉತ್ಪಾದನೆಯಾಗುತ್ತದೆ.
ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಪ್ರೋಥ್ರೊಂಬಿನ್ ಎಂಬ ಪ್ರೋಟೀನ್ ನಿರ್ಮಾಣದಲ್ಲಿ ವಿಟಮಿನ್ ಕೆ ಮುಖ್ಯ ಪಾತ್ರವಹಿಸುತ್ತದೆ. ಹಾಗೆಯೇ ಇದು ಮೂಳೆಗಳ ಬಲವರ್ಧನೆಗೂ ಸಹಕಾರಿ. K1 ಮುಖ್ಯವಾಗಿ ಸಸ್ಯಾಧಾರಿತ ಆಹಾರಗಳಲ್ಲಿ ಕಂಡುಬರುತ್ತದೆ, K2 ಪ್ರಾಣಿ ಮೂಲದ ಆಹಾರಗಳಲ್ಲಿ ಲಭ್ಯ.
ವಯಸ್ಕರಲ್ಲಿ ವಿಟಮಿನ್ ಕೆ ಕೊರತೆ ಅಪರೂಪವಾದರೂ, ದೀರ್ಘಕಾಲ ಪ್ರತಿಜೀವಕ ಔಷಧಿ ಸೇವನೆ, ಆಹಾರ ಕೊರತೆ ಅಥವಾ ಪೋಷಕಾಂಶ ಶೋಷಣೆಯ ಸಮಸ್ಯೆಯಿಂದ ಕೊರತೆ ಉಂಟಾಗಬಹುದು. ನವಜಾತ ಶಿಶುಗಳಲ್ಲಿ ಇದು ಸಾಮಾನ್ಯ, ಏಕೆಂದರೆ ತಾಯಿ ಹಾಲಿನಲ್ಲಿ ವಿಟಮಿನ್ ಕೆ ಪ್ರಮಾಣ ಕಡಿಮೆ.
ವಿಟಮಿನ್ ಕೆ ಕೊರತೆಯಿಂದ ಗಾಯದ ನಂತರ ರಕ್ತಸ್ರಾವ ನಿಲ್ಲಲು ಹೆಚ್ಚು ಸಮಯ ಹಿಡಿಯಬಹುದು, ರಕ್ತಹೀನತೆ, ಹೊಟ್ಟೆ ನೋವು ಮತ್ತು ಮೂಗಿನ ರಕ್ತಸ್ರಾವ ಉಂಟಾಗಬಹುದು.
ವಿಟಮಿನ್ ಕೆ ಹೊಂದಿರುವ ಪ್ರಮುಖ ಆಹಾರಗಳು: ಪಾಲಕ್, ಎಲೆಕೋಸು, ಬ್ರಸೆಲ್ಸ್ ಮೊಗ್ಗುಗಳು, ಲೆಟಸ್, ಕೋಸುಗಡ್ಡೆ, ಸೋಯಾಬೀನ್, ಕ್ಯಾನೋಲಾ ಎಣ್ಣೆ, ಮಾಂಸ, ಚೀಸ್ ಮತ್ತು ಮೊಟ್ಟೆ ಇತ್ಯಾದಿ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)