Friday, November 7, 2025

ಬಸ್‌ ಓಡಿಸುವಾಗಲೇ ಹಾರ್ಟ್‌ ಅಟ್ಯಾಕ್‌:ಪ್ರಯಾಣಿಕರನ್ನು ರಕ್ಷಿಸಿ ಪ್ರಾಣಬಿಟ್ಟ ಚಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

 ಬಸ್ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡರೂ ಲೆಕ್ಕಿಸದೇ ಪ್ರಯಾಣಿಕರ ರಕ್ಷಣೆಗಾಗಿ ಬಸ್ ನಿಲ್ಲಿಸಿ ಚಾಲಕ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್ ಬಳಿ ನಡೆದಿದೆ.

ಉತ್ತರ ಕರ್ನಾಟಕ ಮೂಲದ ರಾಜೀವ್ ಬಿರಾದಾರ ಮೃತ ಕೆಎಸ್‌ಆರ್‌ಟಿಸಿ ಚಾಲಕ. ಬಸ್ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ದಾವಣಗೆರೆಯ ಹರಿಹರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಹೊರಟ ಬಸ್ ನೆಲಮಂಗಲ ಟೋಲ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ನೋವಿನಲ್ಲಿಯೂ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ. ಈ ವೇಳೆ ಪ್ರಯಾಣಿಕರು 108ಗೆ ಕರೆ ಮಾಡಿ, ಆಂಬುಲೆನ್ಸ್ ಕರೆಯಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಚಾಲಕ ಸಾವನ್ನಪ್ಪಿದ್ದಾರೆ.

ನೆಲಮಂಗಲ ಸಾರ್ವಜನಿಕ ಆಸ್ಪತ್ರೆ ವೈದ್ಯರು ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಸದ್ಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!