Friday, August 29, 2025

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ನಾಳೆ ಏಳು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಜಿಲ್ಲೆಯ ಒಟ್ಟು 7 ತಾಲ್ಲೂಕುಗಳಲ್ಲಿ ಆ.30 ಶನಿವಾರದಂದು ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಪ್ರಕಾರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಮತ್ತು ಕಳಸ ತಾಲ್ಲೂಕುಗಳಲ್ಲಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ರಜೆ ಇರಲಿದೆ. ಇದರ ಜೊತೆಗೆ, ಚಿಕ್ಕಮಗಳೂರು ತಾಲ್ಲೂಕಿನ ಕಸಬಾ, ಅಂಬಳೆ, ಆಲ್ದೂರು, ವಸ್ತಾರೆ, ಖಾಂಡ್ಯ, ಆವತಿ, ಮತ್ತು ಜಾಗರ ಹೋಬಳಿಗಳಿಗೂ ರಜೆ ಅನ್ವಯಿಸಲಿದೆ. ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ-ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.

ರಜೆ ಘೋಷಿಸಿರುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಯಾವುದೇ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಪರಿಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ