ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಹವಾಮಾನ ಇಲಾಖೆ (IMD) ಹೊಸ ಮುನ್ಸೂಚನೆ ಬಿಡುಗಡೆ ಮಾಡಿದ್ದು, ರಾಜಸ್ಥಾನ, ಒಡಿಶಾ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ವಿಶೇಷವಾಗಿ ಗುಜರಾತ್ ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಸೆಪ್ಟೆಂಬರ್ 6 ಹಾಗೂ 7ರಂದು ಅತಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಲಾಗಿದೆ.
ರಾಜಸ್ಥಾನದ ಅನೇಕ ಭಾಗಗಳಲ್ಲಿ ಈಗಾಗಲೇ ಭಾರೀ ಮಳೆ ದಾಖಲಾಗಿದೆ. ದೌಸಾ ಜಿಲ್ಲೆಯ ಸಿಕ್ರಿಯಲ್ಲಿ ಕಳೆದ 24 ಗಂಟೆಗಳಲ್ಲಿ 104 ಮಿ.ಮೀ ಮಳೆಯಾಗಿದೆ. ಇನ್ನೂ 4-5 ದಿನಗಳ ಕಾಲ ಮಳೆ ಮುಂದುವರಿಯುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಇನ್ನೊಂದೆಡೆ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಯಾವುದೇ ಮಳೆಯ ಎಚ್ಚರಿಕೆ ಇಲ್ಲ. ಆದರೆ ಗುರುಗ್ರಾಮ್ ಮತ್ತು ಫರಿದಾಬಾದ್ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಸಹ ಕೆಲವೊಂದು ಭಾಗಗಳಲ್ಲಿ ತೀರಾ ಕಡಿಮೆ ಪ್ರಮಾಣದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.