Wednesday, September 3, 2025

ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ: ಐದು ಮರಗಳು ಧರೆಗೆ, ಎಲ್ಲವೂ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಸೋಮವಾರ ಸಂಜೆ ಒಟ್ಟು 30.6 ಮಿಮೀ ಮಳೆಯಾಗಿದೆ. ಮಳೆಯ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು, ಸವಾರರು ಪರದಾಡುವಂತಾಗಿತ್ತು.

ಸಂಜೆ 6 ಗಂಟೆಯ ನಂತರ ನಗರದಲ್ಲಿ ಭಾರೀ ಮಳೆಯಾಗಿದ್ದು, ಪರಿಣಾಮ 5 ಮರಗಳು ಧರೆಗುರುಳಿದವು. ಆದರೆ, ಯಾವುದೇ ಸಾವು ನೋವು ಅಥವಾ ವಾಹನಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿ ಮಾಹಿತಿ ನೀಡಿದೆ.

ಬಿನ್ನಿ ಮಿಲ್ ಮುಖ್ಯ ರಸ್ತೆ, ಕೆಆರ್ ವೃತ್ತದ ಅಂಡರ್‌ಪಾಸ್, ಬನ್ನೇರುಘಟ್ಟ ಮುಖ್ಯ ರಸ್ತೆ, ಸಿಲ್ಕ್ ಬೋರ್ಡ್, ಬಿಳೇಕಳ್ಳಿ, ಪಾಣತ್ತೂರು, ಹೊಸೂರು ರಸ್ತೆ ಕಡೆಗೆ ಸಾಗುವ ವೀರಸಂದ್ರ ಜಂಕ್ಷನ್, ಜಯದೇವ, ವೈಟ್‌ಫೀಲ್ಡ್, ವರ್ತೂರು ಕೋಡಿ ಬಸ್ ನಿಲ್ದಾಣ ಮತ್ತು ಥುಬರಹಳ್ಳಿಯಲಲಿ ನೀರು ನಿಂತ ಕಾರಣ ಸಂಚಾರ ನಿಧಾನವಾಗಿತ್ತು.

ದೊಡ್ಡನೇಕುಂಡಿ ಹೊರ ವರ್ತುಲ ರಸ್ತೆ, ವರ್ತೂರು ಕಾಲೇಜು, ಉತ್ತರಳ್ಳಿ ವೃತ್ತ, ಮೆಜೆಸ್ಟಿಕ್ ಬಸ್ ನಿಲ್ದಾಣ, ಎಸ್‌ಜೆಪಿ ರಸ್ತೆ, ರುಪೀನಗರದಿಂದ ಬೊಮ್ಮನಹಳ್ಳಿ, ಇಕೋಸ್ಪೇಸ್, ​​ಬೆಳ್ಳಂದೂರು ಮತ್ತು ಬೊಮ್ಮನಹಳ್ಳಿಯಿಂದ ರುಪೀನಗರ ಮುಂತಾದ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇದಲ್ಲದೆ, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಹಳೆ ತರಗುಪೇಟೆ, ಸಂಪಂಗಿರಾಮ್ ನಗರ ಮತ್ತು ಜಯಮಹಲ್ ರಸ್ತೆಗಳಲ್ಲಿಯೂ ಸಂಚಾರ ಅಸ್ತವ್ಯಸ್ತವಾಗಿತ್ತು.

ಮುಖ್ಯ ರಸ್ತೆಯಲ್ಲಿ ನೀರು ನಿಂತ ಕಾರಣ, ಎಂಎಂಟಿ ಬಸ್ ನಿಲ್ದಾಣ, ಸಾಗರ್ ಜಂಕ್ಷನ್, ಸಾರಕ್ಕಿ ಜಂಕ್ಷನ್, ಎಚ್‌ಎಸ್‌ಬಿಸಿ ಜಂಕ್ಷನ್ ಮತ್ತು ಮಡಿವಾಳ ಪೊಲೀಸ್ ಠಾಣೆ ಬಳಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಎಂದು ತಿಳಿದುಬಂದಿದೆ.

ಯಲಹಂಕ, ಜಯದೇವ ಆಸ್ಪತ್ರೆ ಬಳಿ, ಜಯನಗರ, ವೈಟ್‌ಫೀಲ್ಡ್ ಮತ್ತು ಜ್ಞಾನಭಾರತಿ ಬಳಿ ಮರಗಳು ಉರುಳಿಬಿದ್ದಿವೆ ಎಂದು ಬಿಬಿಎಂಪಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಇದೀಗ ಬೇರುಸಹಿತ ಮರಗಳನ್ನು ತೆರವುಗೊಳಿಸಲು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ