Saturday, December 13, 2025

2025 | ಈ ವರ್ಷ ಇಹಲೋಕಕ್ಕೆ ವಿದಾಯ ಹೇಳಿ ನಮ್ಮ ಕನ್ನಡ ಸಿನಿ ಇಂಡಸ್ಟ್ರಿಯ ತಾರೆಗಳಿವರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲ ಹೃದಯ ವಿದ್ರಾವಕ ಘಟನೆಗಳು ನಡೆದಿವೆ. ಕನ್ನಡತಿ, ಬಹುಭಾಷಾ ನಟಿ ಬಿ.ಸರೋಜಾ ದೇವಿ ಅವರಿಂದ ಹಿಡಿದು ಧರ್ಮೇಂದ್ರ ಅವರವರೆಗೆ ಹಲವು ಸಿನಿಮಾ ದಿಗ್ಗಜರನ್ನು ನಾವು ಕಳೆದುಕೊಂಡಿದ್ದೇವೆ.. 2025ರ ಹಿನ್ನೋಟ ಹೀಗಿದೆ..

ಕನ್ನಡ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾ ದೇವಿ ಅವರು ಜುಲೈ 14ರಂದು ಬೆಂಗಳೂರಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಆನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಾರೆಯ ನಿಧನವು ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ದಕ್ಷಿಣ ಭಾರತ ಚಲನಚಿತ್ರೋದ್ಯಮದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸಿತು.

ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಎಂ.ಎಸ್. ಉಮೇಶ್ ಅವರು ನವೆಂಬರ್ 30ರಂದು ಬೆಂಗಳೂರಿನಲ್ಲಿ ನಿಧನರಾದರು. ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ, ದೀರ್ಘಕಾಲದ ಹೋರಾಟದ ನಂತರ ನವೆಂಬರ್ 30ರ ಬೆಳಗ್ಗೆ 8:30ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 6 ದಶಕಗಳ ಕಾಲ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಮರೆಯಾದ ಕಲಾವಿದನಿಗೆ ತೀವ್ರ ಸಂತಾಪ ವ್ಯಕ್ತವಾಗಿತ್ತು.

ಬ್ಲಾಕ್​​​​ಬಸ್ಟರ್​ ‘ಕೆಜಿಎಫ್’​ ಮೂಲಕ ‘ಕೆಜಿಎಫ್​​​ ಚಾಚಾ’ ಎಂದೇ ಜನಪ್ರಿಯರಾಗಿದ್ದ ನಟ ಹರೀಶ್​ ರಾಯ್ , 4ನೇ ಹಂತದ ಥೈರಾಯ್ಡ್ ಕ್ಯಾನ್ಸರ್ ವಿರುದ್ಧ ಹೋರಾಡಿ ಬೆಂಗಳೂರಿನಲ್ಲಿ ನಿಧನರಾದರು. 55 ವರ್ಷದ ನಟ, ತಮ್ಮ ಪ್ರಭಾವಶಾಲಿ ಸ್ಕ್ರೀನ್​ ಪ್ರಸೆನ್ಸ್​​​ನಿಂದಾಗಿ ವ್ಯಾಪಕ ಮೆಚ್ಚುಗೆ ಪಡೆದಿದ್ದರು.

ಖ್ಯಾತ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರು ಅಕ್ಟೋಬರ್ 13ರಂದು ತಮ್ಮ 62ನೇ ವಯಸ್ಸಿನಲ್ಲಿ ನಿಧನರಾದರು. ಚಿತ್ರೀಕರಣ ಸಲುವಾಗಿ ಉಡುಪಿಯಲ್ಲಿದ್ದರು. ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದುರಾದೃಷ್ಟವಶಾತ್​ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕ್ಯಾಸೆಟ್ ಕಿಂಗ್, ಕನ್ನಡದ ಸೆಂದಿಲ್ ಸೇರಿ ಹಲವು ಬಿರುದುಗಳನ್ನು ಹೊಂದಿದ್ದ ಖ್ಯಾತ ನಟ ಹೃದಯಾಘಾತದಿಂದ ನಿಧನರಾದರು.

ರಂಗಭೂಮಿ ಕಲಾವಿದ, ಸೂಪರ್​ ಹಿಟ್ ‘ರಾಮ ಶಾಮ ಭಾಮ‌’ ಸಿನಿಮಾ ಖ್ಯಾತಿಯ ಹಾಸ್ಯ ನಟ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ಸೆಪ್ಟಂಬರ್​​ 29ರಂದು ಕೊನೆಯುಸಿರೆಳೆದರು. ನಟನಿಗೆ 62 ವರ್ಷಗಳಾಗಿತ್ತು.

 ವಯೋಸಹಜ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಏಪ್ರಿಲ್ 14ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. 80-90ರ ದಶಕದ ಸಂದರ್ಭ ಬೇಡಿಕೆ ಹೊಂದಿದ್ದ ಇವರು, ಸರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಜನಪ್ರಿಯ ಕನ್ನಡ, ತುಳು ನಟ ಮತ್ತು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ, ಮೇ 11ರಂದು ತಮ್ಮ 34ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

 ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಲಿಯಾಸ್​ ಚನ್ನೇಗೌಡ ಅವರು ನವೆಂಬರ್​ 12ರಂದು ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆ, ಕೆಮ್ಮು, ಉಬ್ಬಸ, ಶ್ರವಣದೋಷ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿದ್ದರು.

error: Content is protected !!