Sunday, September 7, 2025

ಮಗ ಕಾಣೆಯಾಗಿದ್ದಾನೆಂದು ಸುಳ್ಳು ಕೇಸ್ ಹಾಕಿದ ತಾಯಿಗೆ ದಂಡ ವಿಧಿಸಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಆರೋಪ ಮಾಡಿ ಕಾನೂನು ವ್ಯವಸ್ಥೆಯನ್ನು ತಪ್ಪು ದಾರಿಯಲ್ಲಿ ನಡೆಸಲು ಯತ್ನಿಸಿದ ತಾಯಿಗೆ ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಿನ ತೀರ್ಪು ನೀಡಿದೆ.

ಬೆಂಗಳೂರಿನ ಇಂದಿರಾನಗರ ನಿವಾಸಿ ಮಹೇಶ್ವರಿ ಎಂಬುವವರು ತಮ್ಮ ಮಗ ಕೃಪಲಾನಿ ಕಾಣೆಯಾಗಿದ್ದಾನೆಂದು ಹೈಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದರೆ ತನಿಖೆಯಲ್ಲಿ ಇದು ಸುಳ್ಳು ದೂರು ಎಂದು ಬಹಿರಂಗವಾಗಿದ್ದು, ಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.

ಘಟನೆಯ ವಿವರಗಳ ಪ್ರಕಾರ, ಕೃಪಲಾನಿ ತಮ್ಮ ಪಕ್ಕದ ಮನೆಯವರು ಗಲಾಟೆ ಮಾಡುತ್ತಾರೆ, ಗಾಂಜಾ ಮಾರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್ ದಾಖಲಾಗಿತ್ತು. ಈ ಬಗ್ಗೆ ಎನ್​​​ಸಿಆರ್ ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು ತನಿಖೆ ನಡೆಸಿದಾಗ ಸುಳ್ಳು ಕೇಸ್ ಎಂದು ಗೊತ್ತಾಗಿತ್ತು. ಬಳಿಕ ಇನ್ಸ್‌ಪೆಕ್ಟರ್ ವಿರುದ್ಧವೂ ಕೃಪಲಾನಿ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಮೇಲಿನ ಕೋಪದಿಂದ ತಾಯಿ ಮಹೇಶ್ವರಿಯಿಂದ ತಮ್ಮ ಮಗ ಕಾಣೆಯಾಗಿದ್ದಾನೆಂದು ಸುಳ್ಳು ಪ್ರಕರಣ ಹಾಕಿದ್ದರು. ಪೊಲೀಸ್ ಠಾಣೆಗೆ ಹೋದವನು ವಾಪಸ್ ಬಂದಿಲ್ಲ ಎಂದು ತಾಯಿ ದೂರಿದ್ದರು.

ಪೊಲೀಸರು ತನಿಖೆ ನಡೆಸಿದಾಗ, ಕೃಪಲಾನಿ ಚೆನ್ನೈನ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಇದ್ದದ್ದು ಪತ್ತೆಯಾಯಿತು. ಸಿಡಿಆರ್ ವಿವರಗಳಿಂದ ತಾಯಿ ಮತ್ತು ಮಗ ನಿರಂತರ ಸಂಪರ್ಕದಲ್ಲಿದ್ದರೆಂಬುದೂ ಹೊರಬಂದಿತ್ತು. ನಂತರ ಕೃಪಲಾನಿಯನ್ನು ಪೊಲೀಸರು ಚೆನ್ನೈನಿಂದ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಿದರು. ಇದರಿಂದ ತಾಯಿ ಸುಳ್ಳು ಕೇಸ್ ಹಾಕಿದ್ದರೆಂಬುದು ದೃಢಪಟ್ಟಿತು.

ಹೀಗಾಗಿ ಹೈಕೋರ್ಟ್ ಮಹೇಶ್ವರಿಗೆ 2 ಲಕ್ಷ ರೂ. ದಂಡ ವಿಧಿಸಿದ್ದು, ಇದರಲ್ಲಿ 1 ಲಕ್ಷ ರೂ.ವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ 1 ಲಕ್ಷ ರೂ.ವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಎರಡು ವಾರದಲ್ಲಿ ದಂಡ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ