Saturday, October 18, 2025

ಹೈಕೋರ್ಟ್ ತೀರ್ಪು: ಪ್ರತಾಪ್ ಸಿಂಹ ವಿರುದ್ಧದ ಚುನಾವಣಾ ನೀತಿ ಉಲ್ಲಂಘನೆ ಪ್ರಕರಣ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪಪಟ್ಟಿ ಸಲ್ಲಿಸುತ್ತಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಪೀಠವು, ಪ್ರಕರಣದ ಆರೋಪಗಳು ಐಪಿಸಿ ಸೆಕ್ಷನ್ 171ಎಚ್ (ಚುನಾವಣೆಗೆ ಸಂಬಂಧಿಸಿದ ಅಕ್ರಮ ಪಾವತಿಗಳು) ಅಥವಾ ಸೆಕ್ಷನ್ 188 (ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ) ಅಡಿಯಲ್ಲಿ ಅನ್ವಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಪೀಠದ ಅಭಿಪ್ರಾಯದಲ್ಲಿ, ಸಬ್ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿಯೊಬ್ಬರು ಆರೋಪಪಟ್ಟಿ ಸಲ್ಲಿಸಿದ್ದು, ಸೆಕ್ಷನ್‌ಗಳ ಮಧ್ಯೆ ಇರುವ ಕಾನೂನುಬದ್ಧ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಕ್ರಮ ಕೈಗೊಂಡಿದ್ದಾರೆ. ಪ್ರಮುಖರಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲವೊಮ್ಮೆ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಆ ಮೂಲಕ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯವೇ ರದ್ದುಪಡಿಸಿದೆ ಎಂಬುದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಪ್ರಕರಣ ದಾಖಲಿಸಬೇಕು. ಆದರೆ ಅದು ವಿಫಲವಾಗಬೇಕು ಎಂಬುದು ಅಧಿಕಾರಿಗಳ ಧೋರಣೆ. ಎಲ್ಲವೂ ಗೊತ್ತಿದ್ದೇ ಅಧಿಕಾರಿಗಳು ಹೀಗೆ ಮಾಡುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

error: Content is protected !!