ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮಘಟ್ಟದ ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪಳ್ಳ ಎಂಬಲ್ಲಿ ಗುಡ್ದ ಜರಿತವುಂಟಾಗಿದ್ದು, ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೆಂಪಳ್ಳದಲ್ಲಿ ಸಾಯಂಕಾಲದ ವೇಳೆ ಗುಡ್ಡದಿಂದ ಮಣ್ಣು ಜರಿದು ಹೆದ್ದಾರಿಗೆ ಬಿದ್ದಿದೆ . ಇದರಿಂದಾಗಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆಯಾದರೂ, ಸಕಾಲಿಕ ಕಾರ್ಯಾಚರಣೆಯಿಂದಾಗಿ ರಾತ್ರಿ ವೇಳೆ ವಾಹನ ಸಂಚಾರವನ್ನು ಪುನರಾರಂಭಗೊಳಿಸಲಾಗಿದೆ.
ಈ ಮಧ್ಯೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮರಧಾರ ನದಿಗಳಲ್ಲಿ ಸಾಯಂಕಾಲದ ವೇಳೆಗೆ ೦.೬ ಮೀಟರ್ ಹೆಚ್ಚಳ ಕಾಣಿಸಿದೆ. ಕಳೆದ ಮೂರು ದಿನಗಳಿಂದ ಬಿರುಗಾಳಿ ಸಹಿತ ಮಳೆ ಪದೇ ಪದೇ ಸುರಿಯುತ್ತಿದ್ದು, ಮಳೆಯ ನಡುವೆಯೇ ಸ್ವಾತಂತ್ರ್ಯೋತ್ಸವ ಹಾಗೂ ಮೊಸರುಕುಡಿಕೆ ಉತ್ಸವಗಳನ್ನು ನಡೆಸುವಂತಾಗಿದೆ.