Friday, October 24, 2025

ಡಿಸಿ ಜತೆ ಬೆಟ್ಟಿಂಗ್ ಕಟ್ಟಿ ಸೋತ ಗೃಹ ಸಚಿವ: ಡಾ.ಜಿ. ಪರಮೇಶ್ವರ್ ನಡೆಗೆ ವ್ಯಾಪಕ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಆಗಮಿಸಿದ್ದ ಗೃಹ ಸಚಿವ ಪರಮೇಶ್ವರ್‌ ಅವರು, ಡಿಸಿ ಜತೆ ಬೆಟ್ಟಿಂಗ್ ಕಟ್ಟಿ 500 ರೂ. ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅವರು ತಮಾಷೆಗೆ ಬೆಟ್ಟಿಂಗ್‌ ಕಟ್ಟಿದ್ದರೂ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದರು.

ನಾನು 500 ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜತೆ ಬೆಟ್ಟಿಂಗ್ ಕಟ್ಟಿದ್ದೆ. ಆದರೆ ಸೋತೆ ಎಂದು ತಾವೇ ಹೇಳಿಕೊಂಡಿದ್ದು, ಈ ಸಂಬಂಧ ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಗೃಹ ಸಚಿವರಾಗಿದ್ದವರು ಬಹಿರಂಗವಾಗಿಯೇ ಬೆಟ್ಟಿಂಗ್ ಆಡಿರುವ ಬಗ್ಗೆ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಕೆಲವರು ತಮಾಷೆಗಾಗಿ ಬೆಟ್ಟಿಂಗ್ ಕಟ್ಟಿದ್ದಾರೆ ಬಿಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿ ತಮಾಷೆಗಾಗಿ ಕಟ್ಟಿರಬಹುದು. ಆದರೆ, ಅವರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕಿತ್ತು.ಗೃಹ ಸಚಿವರಾಗಿ ಇಂತಹ ಅಪರಾಧ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವವರೇ ಬೆಟ್ಟಿಂಗ್ ಕಟ್ಟಿರುವ ಬಗ್ಗೆ ಹೇಳಿಕೊಳ್ಳುವ ಮೂಲಕ ಸಮಾಜಕ್ಕೆ ಇವರು ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!