ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದ ಕೋಗಿಲು ಲೇಔಟ್‌ನಲ್ಲಿ ನಡೆದ ಅಕ್ರಮ ಮನೆ ತೆರವು ಕಾರ್ಯಾಚರಣೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ಆದ್ಯತೆ ಕೇವಲ ಕರ್ನಾಟಕದವರಿಗೆ ಮಾತ್ರ. ಹೊರಗಿನಿಂದ ಬಂದವರಿಗೆ ನಾವು ಮನೆಗಳನ್ನು ನೀಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವಿವಾದದ ವಿಚಾರದಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಅಥವಾ ಉಲ್ಲೇಖಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಈ ವಿಷಯಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ದೇಶದ ಮುಸ್ಲಿಮರನ್ನು ನೋಡಿಕೊಳ್ಳಲು ನಾವಿದ್ದೇವೆ. ಪಾಕಿಸ್ತಾನದಲ್ಲಿ ವಿಪರೀತ ಬಡತನವಿದೆ, ಮೊದಲು ಅವರು ತಮ್ಮ ದೇಶದ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿ. ನಮಗೆ ಬುದ್ಧಿ ಹೇಳುವ ಅಗತ್ಯ ಅವರಿಗಿಲ್ಲ,” ಎಂದು ವಾಗ್ದಾಳಿ ನಡೆಸಿದರು.
ಅಕ್ರಮ ಮನೆಗಳ ಸಕ್ರಮದ ಬಗ್ಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈಗಾಗಲೇ ದಾಖಲೆಗಳ ಪರಿಶೀಲನೆಗೆ ಸೂಚಿಸಿದ್ದಾರೆ. ನಾಳೆ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಆದರೆ, ಕರ್ನಾಟಕದ ಮೂಲದವರಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲು ನಾವು ತೀರ್ಮಾನಿಸಿದ್ದೇವೆ,” ಎಂದರು.
ಇದೇ ವೇಳೆ ಕೇರಳದಿಂದ ಬಂದಿದ್ದ ನಿಯೋಗದ ಭೇಟಿಯನ್ನು ರಾಜಕೀಯ ಪ್ರೇರಿತ ಎಂದು ಕರೆದ ಸಚಿವರು, “ಮುಂದಿನ ವರ್ಷ ಚುನಾವಣೆ ಇರುವುದರಿಂದ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಯುಪಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆದಾಗ ಈ ನಿಯೋಗ ಎಲ್ಲಿ ಹೋಗಿತ್ತು? ಕೇರಳ ಸರ್ಕಾರ ಅಥವಾ ಅಲ್ಲಿನ ಪಕ್ಷಗಳು ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಲಿಲ್ಲ. ಆದರೆ, ಕೇರಳದಲ್ಲಿ ಪ್ರವಾಹ ಬಂದಾಗ ಕರ್ನಾಟಕ ಸರ್ಕಾರ 100 ಮನೆಗಳನ್ನು ನಿರ್ಮಿಸಿಕೊಡುತ್ತಿದೆ,” ಎಂದು ನೆನಪಿಸಿದರು.
ಅಕ್ರಮ ಮನೆಗಳನ್ನು ಏಕೆ ಸಕ್ರಮಗೊಳಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಚಿವರು, ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.

