ಹೊಸದಿಗಂತ ವರದಿ ಹುಬ್ಬಳ್ಳಿ:
ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕಾ ಹಕ್ಕುಗಳ ನಿರ್ದೇಶನಾಲಯದಿಂದ(ಡಿಸಿಆರ್ ಇ) ತನಿಖೆ ನಡೆಯುತ್ತಿದ್ದು, ಪ್ರಬಲ ಸಾಕ್ಷ್ಯಾಧಾರಗಳು ದೊರೆತಿವೆ. 60 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗುವುದು ಎಂದು ಡಿಸಿಆರ್ ಇ ಡಿಜಿಪಿ ರಾಮಚಂದ್ರ ರಾವ್ ತಿಳಿಸಿದರು.
ಶನಿವಾರ ತಾಲೂಕಿನ ಇನಾಂ ವೀರಾಪುರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ನೀಡಿ ಬಳಿಕ ನಗರದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾನ್ಯಾ ಹತ್ಯೆ ಪ್ರಕರಣದಲ್ಲಿ 14 ಜನರ ಮೇಲೆ ಎಫ್ ಐಆರ್ ದಾಖಲಾಗಿದ್ದು, 8 ಜನರ ಬಂಧಿಸಲಾಗಿದೆ. ಪ್ರಬಲ ಸಾಕ್ಷ್ಯಾಧಾರಗಳಾದ ಸಿಸಿಟಿವಿ ಕ್ಯಾಮರಾ ದೃಶ್ಯಗಳು ಸಿಕ್ಕಿದ್ದು, ಸೀಜ್ ಮಾಡಿ ವಿಧಿ ವಿಜ್ಞಾನ ಕೇಂದ್ರಕ್ಕೆ(ಎಫ್ ಎಸ್ ಎಲ್) ಗೆ ಕಳುಹಿಸಲಾಗಿದೆ. ಇನ್ನೂ ಹೆಚ್ಚಿನ ಸಾಕ್ಷಿಗಳನ್ನು ನಮ್ಮ ತನಿಖಾ ತಂಡ ಕಳೆಹಾಕುತ್ತಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ನ್ಯಾಯಾಲಯ ಹಾಗೂ ವಿಶೇಷ ಪ್ರಾಸಿಕ್ಯೂಷನ್ ನೇಮಕ ಮಾಡುವುದಾಗಿ ಗೃಹ ಸಚಿವ ಜಿ. ಪರಮೇಶರ ಅವರು ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆ ನಮ್ಮ ಡಿಸಿಆರ್ ಇ ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೊಂದವರಿಗೆ ನ್ಯಾಯ ದೊರೆಯುವ ನಿಟ್ಟಿನಲ್ಲಿ ನಮ್ಮ ನಿರ್ದೇಶನಾಲಯ ಕೆಲಸ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 33 ಡಿಸಿಆರ್ ಇ ಠಾಣೆಗಳಿವೆ. 11 ಜನ ಡಿಎಸ್ ಪಿಗಳು, ಉಳಿದಂತೆ ಪಿಐ ಹಾಗೂ ಪಿಎಸ್ ಐಗಳಿದ್ದಾರೆ. ವರ್ಷಕ್ಕೆ ರಾಜ್ಯದಲ್ಲಿ ಸುಮಾರು 2500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಡಿಎಸ್ ಪಿಗಳ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀರ್ಘದಲ್ಲಿಯೇ ಸರ್ಕಾರ ನೇಮಕ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಬಿಟ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದರಿಂದ ಇಂತಹ ದುರ್ಘಟನೆಗಳ ತಡೆಯಬಹದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಕುಟುಂಬಸ್ಥರು ಭಯದ ವಾತಾವರಣದಿಂದ ಹೊರ ತರಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಳೆ ಹಲವು ಕ್ರಮ ಈಗಾಗಲೇ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯಾ, ಡಿಸಿಆರ್ ಇ ಎಸ್ ಪಿ ರವೀಂದ್ರ ಕೆ.ಜಿ ಇದ್ದರು.

