ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸಕೆರೆಹಳ್ಳಿ ಸಮೀಪದ ನೈಸ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಇಬ್ಬರು ಮಹಿಳಾ ದಿನಗೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ವೇಗವಾಗಿ ಬಂದ ಅಪರಿಚಿತ ಕಾರು ರಸ್ತೆಯ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಗುದ್ದಿ, ನಿಲ್ಲಿಸದೆ ಪರಾರಿಯಾಗಿದೆ.
ಮೃತರನ್ನು ಯಾದಗಿರಿ ಮೂಲದವರಾದ ರಂಗಮ್ಮ (45) ಮತ್ತು ಚೌಡಮ್ಮ (55) ಎಂದು ಗುರುತಿಸಲಾಗಿದೆ. ಇಬ್ಬರೂ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದರು.
ಶುಕ್ರವಾರ ಸಂಜೆ 5:55ರ ಸುಮಾರಿಗೆ ಇಬ್ಬರು ಕಾರ್ಮಿಕರು ನೈಸ್ ರಸ್ತೆಯ ಪಕ್ಕದಲ್ಲಿ ಹುಲ್ಲು ತೆರವು ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ ಅತಿ ವೇಗವಾಗಿ ಬಂದ ಕಾರೊಂದು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಇಬ್ಬರೂ ಕಾರ್ಮಿಕರು ರಸ್ತೆಗೆ ಬಿದ್ದು, ತೀವ್ರವಾಗಿ ಗಾಯಗೊಂಡ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಕುರಿತು ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು, ಘಟನೆಗೆ ಕಾರಣನಾದ ಅಪರಿಚಿತ ಕಾರು ಮತ್ತು ಚಾಲಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಹುಡುಕಾಟ ತೀವ್ರಗೊಳಿಸಿದ್ದಾರೆ.

