ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಟ್ರಿಪ್‌ಗೆ ಹೋಗ್ತಿದ್ದ ಉತ್ಸಾಹಿಗಳಿಗೆ ನಿರಾಸೆ ಸುದ್ದಿ. ಅದೇನೆಂದರೆ ಸೋಮವಾರದಿಂದ ನಿಮ್ಮ ಮನಸ್ಸಿಗೆ ಬಂದ ಹಾಗೆ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿಗೆ ಹೋಗೋಕೆ ಸಾಧ್ಯವಿಲ್ಲ.
ಚಾರಣಕ್ಕೆ ಬರುವ ಪ್ರವಾಸಿಗರ ಹುಚ್ಚಾಟ ಹಾಗೂ ಅನಿಯಂತ್ರಿತವಾಗಿ ಬರುತ್ತಿದ್ದ ಜನರಿಂದ ಭಾರೀ ಸಮಸ್ಯೆ ಎದುರಾದ ಬಳಿಕ ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು ಪ್ರಾಥಮಿಕವಾಗಿ ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಸೆಪ್ಟೆಂಬರ್ 1 ರಿಂದ ಇದು ಜಾರಿಗೆ ಬರಲಿದ್ದು, ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಚಾರಣಕ್ಕೆ ಹೋಗಬೇಕಿದ್ದಲ್ಲಿ ಮೊದಲು ಆನ್‌ಲೈನ್ ಬುಕ್ಕಿಂಗ್ ಮಾಡೋದು ಕಡ್ಡಾಯವಾಗಿದೆ.
ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿಗೆ ಹೋಗುವ ಪ್ರವಾಸಿಗರು ಈಗ ಆನ್‌ಲೈನ್‌ನಲ್ಲಿ ಮುಂಚಿತವಾಗಿ ಸ್ಲಾಟ್ ಬುಕಿಂಗ್ ಮಾಡಬೇಕಾಗುತ್ತದೆ,ಹೊಸ ವ್ಯವಸ್ಥೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ.
ಆನ್‌ಲೈನ್ ಬುಕ್ಕಿಂಗ್ ಯಾಕೆ ಕಡ್ಡಾಯ?
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರಾ ಜಲಪಾತಗಳನ್ನು ಒಳಗೊಂಡಿರುವ ಚಂದ್ರದ್ರೋಣ ಗುಡ್ಡಗಾಡು ಪ್ರದೇಶಕ್ಕೆ ವರ್ಷದಿಂದ ವರ್ಷ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಪಾರ ಜನದಟ್ಟಣೆಗೆ ಕಾರಣವಾಗುತ್ತದೆ. ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು, ಜಿಲ್ಲಾಡಳಿತವು ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಬುಕ್ಕಿಂಗ್ ಹೇಗೆ ಮಾಡೋದು? ಎಷ್ಟು ಶುಲ್ಕ?
ಜಿಲ್ಲಾ ಅಧಿಕೃತ ವೆಬ್‌ಸೈಟ್ https://chikkamagaluru.nic.in/en/tourism ಮೂಲಕ ಬುಕಿಂಗ್ ಮಾಡಬಹುದು. ಪ್ರವಾಸಿಗರು ಬೈಕ್‌ಗಳಿಗೆ 50 ರೂ., ಕಾರುಗಳಿಗೆ 100 ರೂ., ಮೋಟಾರ್ ವಾಹನಗಳಿಗೆ 150 ರೂ. ಮತ್ತು ಟೆಂಪೋ ಟ್ರಾವೆಲರ್‌ಗಳಿಗೆ 200 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಜೊತೆಗೆ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಪ್ರತಿದಿನ ಎರಡು ವಿಸಿಟಿಂಗ್ ಸ್ಲಾಟ್ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ. ಪ್ರತಿ ಸ್ಲಾಟ್‌ನಲ್ಲಿ 600 ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಮುಂಚಿತವಾಗಿ ಬುಕ್ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.