Thursday, September 25, 2025

SHOCKING | ಬ್ಯೂಟಿ ಪಾರ್ಲರ್‌ ಒಳಗೆಯೇ ಹೆಂಡತಿ, ಅತ್ತೆಗೆ ಬೆಂಕಿ ಹಚ್ಚಿ ಕೊಂದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ಬ್ಯೂಟಿ ಪಾರ್ಲರ್ ನಲ್ಲೇ ಪತ್ನಿ ಮತ್ತು ಅತ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್‌ನ ಅಹಮದಾಬಾದ್‌ನ ಕುಬೇರ್‌ನಗರದಲ್ಲಿರುವ ಉಷಾ ಬ್ಯೂಟಿ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದ್ದು, ಪತ್ನಿಜಯಬೆನ್ ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್ ಗೆ ಬಂದ ಪತಿರಾಯ ಅಶೋಕ್ ಬಾಬುಭಾಯ್ ಆಕೆಯೊಂದಿಗೆ ಮಾತುಕತೆ ನಡೆಸಿದ್ದ.

ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಜಗಳ ತಾರಕಕ್ಕೇರುತ್ತಲೇ ಪತ್ನಿಯ ತಾಯಿ ಶೋಭನಾಬೆನ್ ಕೂಡ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ತಾಯಿ ಶೋಭನಾಬೆನ್ ಕೂಡ ಆರೋಪಿಯೊಂದಿಗೆ ಜಗಳಕ್ಕಿಳಿದಿದ್ದು ಇದರಿಂದ ಆಕ್ರೋಶಗೊಂಡ ಪತಿ ಅಶೋಕ್ ತಾನು ತಂದಿದ್ದ ಪೆಟ್ರೋಲ್ ಅನ್ನು ಇಬ್ಬರ ಮೇಲೂ ಸುರಿದು ಬೆಂಕಿ ಹಚ್ಚಿದ್ದಾನೆ.

ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಪತ್ನಿ ಜಯಬೆನ್ ಸಾವನ್ನಪ್ಪಿದ್ದರೆ, ಶೇ.70ರಷ್ಚು ಸುಟ್ಟಗಾಯಗಳೊಂದಿಗೆ ಅತ್ತೆ ಶೋಭನಾಬೆನ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯ ಜಿ-8 ಐಸಿಯು ವಾರ್ಡ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅಂತೆಯೇ ಇದೇ ವೇಳೆ ಆರೋಪಿ ಅಶೋಕ್ ಗೂ ಗಾಯಗಳಾಗಿದ್ದು ಆತನನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಯಬೆನ್ ಅವರ ಸಹೋದರ ನೀಲೇಶ್ ಧರ್ಮದಾಸ್ ಈ ಘಟನೆಗೆ ಸಂಬಂಧಿಸಿದಂತೆ ಸರ್ದಾರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ