Wednesday, November 5, 2025

Viral | ‘ನಾನು ಬಿಳಿ ಪೌರಕಾರ್ಮಿಕ’: ಲುಂಗಿ ಉಟ್ಟು ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ಅಮೆರಿಕದ ಉದ್ಯಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಯಾನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆಗುಂಡಿಗಳು, ಕಸದ ರಾಶಿ ಮತ್ತು ನೈರ್ಮಲ್ಯದ ಕೊರತೆ ಜನರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ನಗರದ ಸ್ವಚ್ಛತೆಗಾಗಿ ಹಲವು ಅಭಿಯಾನಗಳು ನಡೆದರೂ, ಕಸ ಎಸೆದು ನಗರ ಹಾಳುಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ, ಇದೇ ಸಂದರ್ಭದಲ್ಲಿ ವಿದೇಶಿಯೊಬ್ಬರು ಮಾಡಿದ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಅಮೆರಿಕದ ಉದ್ಯಮಿ ಟೋನಿ ಕ್ಲೋರ್ (Tony Klor) ಎಂಬವರು ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿ “ಸ್ವಚ್ಛ ಭಾರತ” ಸಂದೇಶವನ್ನು ಹೊಸ ರೀತಿಯಲ್ಲಿ ಸಾರಿದ್ದಾರೆ.

ಐದು ವರ್ಷಗಳ ಭಾರತೀಯ ವೀಸಾ ಪಡೆದು ಬೆಂಗಳೂರಿನಲ್ಲಿ ನೆಲೆಸಿರುವ ಈ ಅಮೆರಿಕನ್ ವ್ಯಕ್ತಿ, ಪೌರಕಾರ್ಮಿಕರ ಜೊತೆ ಸೇರಿ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸಿದರು. ಅವರು ಲುಂಗಿ ತೊಟ್ಟು, ಕೈಯಲ್ಲಿ ಪೊರಕೆ ಹಿಡಿದು ಬಿಬಿಎಂಪಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟೋನಿ ಅವರು ತಮ್ಮ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, “ ಬೆಂಗಳೂರಿನ ಪಾದಚಾರಿ ಮಾರ್ಗಗಳು ಕೊಳಕಾಗಿವೆ… ನಾನು ಬಿಬಿಎಂಪಿಯ ಹೀರೋಗಳ ಜೊತೆ ‘ಶ್ವೇತ ಪೌರಕಾರ್ಮಿಕ’ ಆಗಿ ಸೇರಿದ್ದೇನೆ” ಎಂದು ಹಾಸ್ಯಮಯ ಶೀರ್ಷಿಕೆ ಬರೆದಿದ್ದಾರೆ. ಅವರ ಈ ವಿಡಿಯೋ ಈಗ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಮಂದಿ ಪ್ರಶಂಸೆಯ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಬಳಕೆದಾರ “ವಿದೇಶಿಗರು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತಿರುವುದು ನಮಗೆ ನಾಚಿಕೆಗೇಡಿನ ಸಂಗತಿ” ಎಂದರೆ, ಮತ್ತೊಬ್ಬರು “ಸ್ವಚ್ಛ ಭಾರತ ಅಭಿಯಾನದ ನಿಜವಾದ ಮುಖ ನೀವು!” ಎಂದು ಶ್ಲಾಘಿಸಿದ್ದಾರೆ. ಇನ್ನೊಬ್ಬರು “ಟೋನಿ ಕ್ಲೋರ್ ಅವರ ಈ ಕೆಲಸ ಎಲ್ಲರಿಗೂ ಪ್ರೇರಣೆ” ಎಂದು ಕಾಮೆಂಟ್ ಮಾಡಿದ್ದಾರೆ.

ಟೋನಿ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿ, “ಭಾರತದಲ್ಲಿ 5 ವರ್ಷ ಉಳಿಯಲು ಅವಕಾಶ ನೀಡಿದಕ್ಕಾಗಿ ನಾನು ಕೃತಜ್ಞ” ಎಂದು ಹೇಳಿದ್ದಾರೆ. ಅವರ ಈ ನಿಸ್ವಾರ್ಥ ಕಾರ್ಯದಿಂದ ಬೆಂಗಳೂರಿನ ನಾಗರಿಕರು ಮಾತ್ರವಲ್ಲ, ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.

https://twitter.com/TonyCatoff/status/1984209420805685683?ref_src=twsrc%5Etfw%7Ctwcamp%5Etweetembed%7Ctwterm%5E1984209420805685683%7Ctwgr%5E0b8d4f7896482e5bbdff685a5c7e67f832f446a1%7Ctwcon%5Es1_c10&ref_url=https%3A%2F%2Fwww.timesnownews.com%2Fviral%2Fim-the-white-pourakarmika-us-man-in-lungi-joins-sanitation-workers-to-clean-bengaluru-streets-video-article-153088814
error: Content is protected !!