Wednesday, December 10, 2025

ಜೈನ ಸಮುದಾಯದ ಜೊತೆ ಯಾವಾಗಲೂ ಇದ್ದೇನೆ: ಡಿಸಿಎಂ ಡಿ. ಕೆ. ಶಿವಕುಮಾರ್

ಹೊಸದಿಗಂತ ವರದಿ,ಬೆಳಗಾವಿ :

ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಇಡೀ ದೇಶದ ಜೈನ ಸಮುದಾಯದವರು ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬುಧವಾರ ಆಚಾರ್ಯರತ್ನ ಶ್ರೀ 108 ಬಾಹುಬಲಿ ಮುನಿಮಹಾರಾಜರ 94 ನೇ ಜನ್ಮಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೀರೇಂದ್ರ ಹೆಗಡೆ ಅವರ ಮೇಲೆ ಯಾವ ರೀತಿ ಷಡ್ಯಂತ್ರ ಆಯಿತು. ಆಗ ಅವರ ಕಷ್ಟಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಹಾಗೂ ಅನೇಕ ನಾಯಕರುಗಳು ಪ್ರಶ್ನೆ ಮಾಡಿದರು ಎಂದರು.

ನಾನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ, ನನ್ನ ಅನುಭವ ಹಾಗೂ ಏನನ್ನು ತಿಳಿದಿದ್ದೇನೋ ಅದನ್ನು ಹೇಳಿದ್ದೇನೆ ಎಂದು ಹೇಳಿದ್ದೆ. ದೂರದಾರರೇ ಆರೋಪಿಗಳಾಗಿ ಉಲ್ಲೇಖಿಸಿರುವ ಚಾರ್ಜ್ ಶೀಟ್ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದರು. ನಾನು ಏನು ಹೇಳಬೇಕೋ ಅದನ್ನು ನೀವೇ ವ್ಯಾಖ್ಯಾನ ಮಾಡಿ ಎಂದಷ್ಟೇ ಉತ್ತರಿಸಿದ್ದೇನೆ ಎಂದು ತಿಳಿಸಿದರು.

ಶಾಂತಿ, ಸಹನೆ, ಅಹಿಂಸೆ, ತ್ಯಾಗದ ಸಂಕೇತ ಜೈನ ಸಮುದಾಯದವರು. ನಿಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದೂ ಸಹ ಕಾಂಗ್ರೆಸ್ ಸರಕಾರ. ಜೈನ ಸಮುದಾಯದ ಜೊತೆ ಯಾವಾಗಲೂ ಇದ್ದೇನೆ ಎಂದು ಹೇಳುತ್ತೇನೆ. ಜೈನರ ಪದ್ದತಿ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದೀರಿ. ಮಾನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತಿನ ಮೇಲೆ ನಂಬಿಕೆ ಇಡೋಣ ಎಂದರು.

ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಈ ವಿಚಾರದಲ್ಲಿ ನಾವು ನಂಬಿಕೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಮತ್ತಿತರರು ಇದ್ದರು.

error: Content is protected !!