ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ ಎಂದು ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಾವು ಬೇಕಾದಾಗ ನಾವು ಬೇಕಾದಾಗ ಬರುವುದು ಬಿಡುವುದು ಅಲ್ಲ. ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು. ನಾವೇ ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ ಎಂದರು.
ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ. ನಾನು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಮುಖ್ಯಮಂತ್ರಿಗಳ ಕಚೇರಿಗೆ ಹೋಗಿಲ್ಲ ಯಾವ ಮಂತ್ರಿಗಳಿಗೆ ದಯಾಪರರಾಗಿ ಕೇಳಿಕೊಂಡಿಲ್ಲ. ಅದಕ್ಕಾಗಿ ನಾನೇ ವಿರೋಧ ಪಕ್ಷದ ನಾಯಕ ಬೇಕಿದ್ರೆ ಸ್ಪೀಕರ್ ಪಕ್ಕದಲ್ಲಿ ಒಂದು ಕುರ್ಚಿ ನನಗೆ ಅಲೋಟ್ಮೆಂಟ್ ಮಾಡಬೇಕು ಅಂತ ನಗೆ ಚಟಾಕಿ ಹಾರಿಸಿದರು.
ಇದೇ ವೇಳೆ ಶಾಸಕ ಯತ್ನಾಳ್, ಸದನದಲ್ಲಿ ತಮ್ಮ ಕುರ್ಚಿ ಬದಲಾಯಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಾ, ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಈ ವೇಳೆ ಯತ್ನಾಳ್ ಅವರನ್ನು ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಕಿಚಾಯಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಯು. ಟಿ. ಖಾದರ್, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಿಲ್ಲ. ಅಧಿಕಾರದಲ್ಲಿ ಇದ್ದಾಗ ಸೀನಿಯರ್, ಇಲ್ಲದಿದ್ದಾಗ ಜ್ಯೂನಿಯರ್. ಶಾಸಕರ ಸಂಖ್ಯಾಬಲ ನೋಡಿಕೊಂಡು ಸೀಟು ಕೊಡುವುದು. ನಿಮಗೆ ಬೇಕಾದಾಗ ಇಲ್ಲಿ ಇರುತ್ತೀರಾ, ಬೇಡ ಅಂದಾಗ ಅಲ್ಲಿಗೆ ಹೋಗುತ್ತೀರಿ ಎಂದು ತಿಳಿಸಿದರು.

