ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 13 ರಂದು ಸಚಿವರಿಗೆ ಏರ್ಪಡಿಸಿರುವ ರಾತ್ರಿ ಔತಣಕೂಟದ (ಡಿನ್ನರ್ ಮೀಟಿಂಗ್) ವಿಷಯದ ಬಗ್ಗೆ ತಮಗೆ ಖಚಿತ ಮಾಹಿತಿ ಇಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಅವರು ವಿಧಾನಸೌಧದಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ನನಗೆ ಔತಣಕೂಟದ ವಿಷಯ ಏನು ಅಂತ ಗೊತ್ತಿಲ್ಲ,” ಎಂದಿದ್ದಾರೆ. ಆದರೆ, ಹಿಂದೆ ಎರಡ್ಮೂರು ಬಾರಿ ಸಭೆ ಕರೆದಾಗ ಸರ್ಕಾರದ ಕಾರ್ಯಕ್ರಮಗಳು, ಅಭಿವೃದ್ಧಿ ಕೆಲಸಗಳು, ಪಕ್ಷದ ಸಂಘಟನೆ ಮತ್ತು ಸ್ಥಳೀಯ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ಬಾರಿಯೂ ಅದೇ ವಿಷಯ ಇರಬಹುದು ಎಂದು ಅವರು ಊಹಿಸಿದ್ದಾರೆ.
ಸಂಪುಟ ಪುನರ್‌ಚನೆ ಬಗ್ಗೆ ಸ್ಪಷ್ಟನೆ
ಸಚಿವರ ಔತಣಕೂಟಕ್ಕೂ ಸಂಪುಟ ಪುನರ್‌ಚನೆಗೂ ಯಾವುದೇ ಸಂಬಂಧ ಇಲ್ಲ ಎಂದು ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಖಾತೆ ಬದಲಾವಣೆ, ಸಂಪುಟ ಪುನರ್‌ಚನೆ ಅಥವಾ ಹೊಸಬರನ್ನು ಸಂಪುಟಕ್ಕೆ ಸೇರಿಸುವಂತಹ ನಿರ್ಧಾರಗಳು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ. ಎರಡೂವರೆ ವರ್ಷಗಳ ನಂತರ ಬೇರೆಯವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಯಾಗುತ್ತದೆ ಮತ್ತು ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ ಸಚಿವರ ಮೌಲ್ಯಮಾಪನದಂತಹ ವಿಷಯವೇನಿಲ್ಲ, ಬದಲಾಗಿ ಎಲ್ಲರಿಗೂ ಅವಕಾಶ ನೀಡುವ ದೃಷ್ಟಿಯಿಂದ ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.