Monday, October 27, 2025

“ನನಗೆ ಯಾವುದೇ ಚಿಂತೆ ಇಲ್ಲ!”: ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ಗಂಭೀರ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಭಾರತ-ಆಸ್ಟ್ರೇಲಿಯಾ (India vs Australia) ಟಿ20 ಸರಣಿ ಅಕ್ಟೋಬರ್ 19ರಿಂದ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಶುಭ್‌ಮನ್ ಗಿಲ್ ನಾಯಕತ್ವ ವಹಿಸಿದ್ದರೆ, ಟಿ20 ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಆದರೆ ನಾಯಕತ್ವದ ಹೊಣೆಗಾರಿಕೆಯಲ್ಲಿ ಯಶಸ್ಸು ಕಂಡ ಸೂರ್ಯಕುಮಾರ್ ಆಟಗಾರನಾಗಿ ತೀರ ಕಳಪೆ ಫಾರ್ಮ್‌ನಲ್ಲಿ ಇರುವುದರಿಂದ, ಅವರ ಸ್ಥಾನದ ಕುರಿತಾಗಿ ಚರ್ಚೆ ಜೋರಾಗಿದೆ. ಈ ಮಧ್ಯೆ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಸೂರ್ಯಕುಮಾರ್ ಫಾರ್ಮ್ ಕುರಿತು ತಮ್ಮ ಅಭಿಪ್ರಾಯವನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದಾರೆ.

ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಗಂಭೀರ್, “ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ನಮ್ಮ ತಂಡ ಆಕ್ರಮಣಕಾರಿ ಕ್ರಿಕೆಟ್ ಶೈಲಿಯನ್ನು ಅಳವಡಿಸಿಕೊಂಡಿದೆ. ಈ ರೀತಿಯ ವಿಧಾನದಲ್ಲಿ ವೈಫಲ್ಯಗಳು ಸಹಜ. ಸೂರ್ಯ 30 ಎಸೆತಗಳಲ್ಲಿ 40 ರನ್ ಗಳಿಸಬಹುದು, ಆದರೆ ನಾವು ಬಯಸುವುದೇ ಪ್ರಭಾವಶೀಲ ಆಟ. ಆದ್ದರಿಂದ ಅವರ ವೈಫಲ್ಯಗಳು ನಮ್ಮ ದೃಷ್ಟಿಯಲ್ಲಿ ಸಮಸ್ಯೆಯಲ್ಲ,” ಎಂದರು.

“ನಮ್ಮ ಗಮನ ಒಬ್ಬ ಆಟಗಾರನ ಮೇಲೆ ಅಲ್ಲ, ಇಡೀ ತಂಡದ ಪ್ರದರ್ಶನದ ಮೇಲೆ ಇದೆ. ಅಭಿಷೇಕ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ, ಸೂರ್ಯ ಲಯಕ್ಕೆ ಬಂದರೆ ಅವರು ಮತ್ತೆ ಹೊಣೆಗಾರಿಕೆಯಿಂದ ಆಡುತ್ತಾರೆ. ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗಣನೆಗಿಂತ ಆಟದ ಪ್ರಭಾವ ಮುಖ್ಯ,” ಎಂದು ಹೇಳಿದರು.

ಗಂಭೀರ್ ಸೂರ್ಯಕುಮಾರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ “ಸೂರ್ಯಕುಮಾರ್ ಒಬ್ಬ ಅದ್ಭುತ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವೇ ಒಳ್ಳೆಯ ನಾಯಕತ್ವವನ್ನು ತರುತ್ತದೆ. ಅವರ ನಿರ್ಭೀತ ಮನೋಭಾವ ಮತ್ತು ಮುಕ್ತ ಶೈಲಿ ಟಿ20 ಕ್ರಿಕೆಟ್‌ನ ನಿಜವಾದ ಸಾರವನ್ನು ಪ್ರತಿಬಿಂಬಿಸುತ್ತದೆ. ನಾವು ತಪ್ಪುಗಳಿಗೆ ಹೆದರುವವರಲ್ಲ, ದೊಡ್ಡ ಪಂದ್ಯಗಳಲ್ಲಿ ಹೆಚ್ಚು ಧೈರ್ಯಶಾಲಿಯಾಗಿರಬೇಕು,” ಎಂದರು.

error: Content is protected !!