ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಡಿಎ ಅಭ್ಯರ್ಥಿಸಿ.ಪಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಎನ್‌ಡಿಎ ಪರವಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ವಿಪಕ್ಷಗಳ I.N.D.I.A ಕೂಟದಿಂದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ಕಣದಲ್ಲಿದ್ದರು.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಇಂದು 767 ಮತಗಳು ಚಲಾವಣೆಯಾದವು. ಅದರಲ್ಲಿ 752 ಮತಗಳು ಮಾನ್ಯವಾದರೆ, 15 ಮತಗಳು ಅಡ್ಡ ಮತದಾನವಾಗಿವೆ. ಚಲಾವಣೆಯಾದ ಮತಗಳಲ್ಲಿ ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ 452 ಮೊದಲ ಪ್ರಾಶಸ್ತ್ಯದ ಮತಗಳು ಬಂದರೆ, ವಿಪಕ್ಷಗಳ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರಿಗೆ ಕೇವಲ 300 ಮತಗಳು ಮಾತ್ರ ಬಿದ್ದಿವೆ.
ಲೆಕ್ಕಾಚಾರದ ಪ್ರಕಾರ ವಿಪಕ್ಷ ಅಭ್ಯರ್ಥಿಗೆ 315 ಮತಗಳು ಬರಬೇಕಿತ್ತು. ಆದರೆ, 300 ಮತಗಳು ಬಂದಿದ್ದು, 15 ಮತಗಳು ಕುಲಗೆಟ್ಟಿವೆ. ಇವು ರಾಧಾಕೃಷ್ಣನ್ ಅವರಿಗೆ ಬಂದಿವೆ ಎಂದು ಬಿಜೆಪಿ ಹೇಳಿದೆ.
ಸೋಲನ್ನು ವಿನಮ್ರತೆಯಿಂದ ಸ್ವೀಕರಿಸುವೆ:
ಇತ್ತ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ವಿಪಕ್ಷಗಳ ಅಭ್ಯರ್ಥಿ ನಿವೃತ್ತ ಜಡ್ಜ್ ಸುದರ್ಶನ್ ರೆಡ್ಡಿ ಅವರು, ಫಲಿತಾಂಶ ನನ್ನ ಪರವಾಗಿಲ್ಲವಾದರೂ, ನಮ್ಮ ನಮ್ಮ ಮಹಾನ್ ಗಣರಾಜ್ಯದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಚಲ ನಂಬಿಕೆಯೊಂದಿಗೆ ಸೋಲನ್ನು ನಾನು ವಿನಮ್ರವಾಗಿ ಸ್ವೀಕರಿಸುವೆ ಎಂದು ಹೇಳಿದರು.
ಫಲಿತಾಂಶ ಏನೇ ಆಗಲಿ, ಸೈದ್ಧಾಂತಿಕ ಹೋರಾಟವು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಸುವೆ. ಪ್ರಜಾಪ್ರಭುತ್ವವು ಗೆಲುವಿನಿಂದ ಮಾತ್ರ ಬಲಗೊಳ್ಳುವುದಿಲ್ಲ. ಸಂವಾದ, ಭಿನ್ನಾಭಿಪ್ರಾಯ, ಭಾಗವಹಿಸುವಿಕೆಯೂ ಪ್ರಜಾಪ್ರಭುತ್ವದ ಬಲವಾಗಿದೆ . ಉಪ ರಾಷ್ಟ್ರಪತಿಗಳಾಗಿ ಆಯ್ಕೆಯಾದ ಸಿ ಪಿ ರಾಧಾಕೃಷ್ಣನ್ ಅವರಿ ಶುಭ ಹಾರೈಸುವೆ ಎಂದು ಇದೇ ವೇಳೆ ಹೇಳಿದರು.