Friday, September 5, 2025

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ಬಿ.ವೈ.ವಿಜಯೇಂದ್ರ ಸವಾಲು

ಹೊಸದಿಗಂತ ವರದಿಚಿತ್ರದುರ್ಗ :

ಬ್ಯಾಲೆಟ್ ಪೇಪರ್ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ರಾಜೀನಾಮೆ ನೀಡಿ, ಚುನಾವಣೆ ಕಣಕ್ಕೆ ಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದರು.

ಇಲ್ಲಿನ ಯಾದವ ಮಹಾಸಂಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಸುತ್ತೇವೆ ಎಂದು ರಾಜ್ಯ ಸರ್ಕಾರ ಕ್ಯಾಬಿನೆಟ್ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಇವಿಎಂ ಮಿಷನ್ ಬಗ್ಗೆ ರಾಹುಲ್ ಗಾಂಧಿ, ಕಾಂಗ್ರೇಸ್‌ನವರಿಗೆ ವಿಶ್ವಾಸವಿಲ್ಲ. ಹಾಗಾಗಿ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದರು.

ಕಾಂಗ್ರೇಸ್‌ನವರು ವಾಸ್ತವಿಕ ಸತ್ಯವನ್ನು ಮರೆ ಮಾಚುತ್ತಿದ್ದಾರೆ. ದೇಶದ ಜನತೆಗೆ ಇವಿಎಂ ಯಂತ್ರಗಳ ಬಗ್ಗೆ ವಿಶ್ವಾಸವಿದೆ. ಆದರೆ ಕಾಂಗ್ರೇಸ್ ಪಕ್ಷ, ನಾಯಕತ್ವದ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ದೇಶವನ್ನು ಮುನ್ನಡೆಸುವ ಶಕ್ತಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ ಎಂದು ದೇಶದ ಮತದಾರರಿಗೆ ತಿಳಿದಿದೆ. ಹಾಗಾಗಿ ಕೇಂದ್ರದಲ್ಲಿ ಮೂರನೇ ಬಾರಿ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.

ಈ ವಾಸ್ತವಿಕ ಸತ್ಯ ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಚುನಾವಣೆ ಆಯೋಗದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಸುಪ್ರಿಂ ಕೋರ್ಟ್, ಚುನಾವಣೆ ಆಯೋಗ, ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೇಸ್‌ನವರು ವಿಶ್ವಾಸ ಕಳೆದುಕೊಂಡಿದ್ದಾರೆ. ಅಕ್ರಮ ನಡೆದಿದ್ದಲ್ಲಿ ೧೩೬ ಶಾಸಕರು, ೯ ಸಂಸದರ ರಾಜೀನಾಮೆ ಪಡೆದು ಚುನಾವಣೆ ಎದುರಿಸಲಿ. ಅಭಿವೃದ್ಧಿ ಯೋಗ್ಯತೆ ಕಾಂಗ್ರೇಸ್ ಸರ್ಕಾರ ಇವಿಎಂ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋಬಳಿ ಮಟ್ಟದಲ್ಲಿ ೨-೩ ಕಡೆಗಳಲ್ಲಿ ಕಾಂಗ್ರೇಸ್ ಪಕ್ಷದ ಕಚೇರಿಗಳನ್ನು ಕಟ್ಟಲು ಸಿಎ ನಿವೇಶನ ಕೊಡುವ ನಿರ್ಣಯ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷಕ್ಕೆ ನಿವೇಶನ ಖರೀದಿಸುವ ತಾಕತ್ತಿಲ್ಲವೇ? ಗ್ರಾಮೀಣ ಜನರಿಗೆ ಸೂರು ಕೊಡಲಾಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆ ನೀಡಲು ಆಗುತ್ತಿಲ್ಲ. ರಾಜ್ಯದಲ್ಲಿ ಭೀಕರ ಮಳೆಯಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರ ಈರುಳ್ಳಿ ಬೆಳೆ ಹಾಳಾಗಿದೆ. ಕಲ್ಯಾಣ ಕರ್ನಾಟಕದ ರೈತರ ತೊಗರಿ ಬೆಳೆ ಹಾಳಾಗಿದೆ. ರೈತರಿಗೆ ಪರಿಹಾರ ನೀಡುವ ಯೋಗ್ಯತೆ ಕಾಂಗ್ರೇಸ್‌ಗೆ ಇಲ್ಲ. ಆದರೆ ವಿಶೇಷ ವಿಮಾನ ಖರೀದಿಗೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಬಂದು ೭೫ ವರ್ಷಗಳಲ್ಲಿ ೫೫-೬೦ ವರ್ಷ ಕಾಂಗ್ರೇಸ್ ಪಕ್ಷ ಆಡಳಿತ ನಡೆಸಿದೆ. ಆದರೆ ದೇಶದ ಜನ ಈಗಲೂ ಗ್ಯಾರಂಟಿ ಯೋಜನೆಗಳ ಮೇಲೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಹಿಮಾಲಚಲ ಪ್ರದೇಶದಲ್ಲಿ ಸರ್ಕಾರ ನಡೆಸಲು ಆಗುತ್ತಿಲ್ಲ. ದೇವಸ್ಥಾನದ ಹುಂಡಿ ಹಣ ಸರ್ಕಾರಕ್ಕೆ ಬೇಕೆಂದು ಅಲ್ಲಿನ ಸಿಎಂ. ಪತ್ರ ಬರೆದಿದ್ದಾರೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ರಾಜ್ಯದ ಪರಿಸ್ಥಿತಿ ಭಿನ್ನವಿಲ್ಲ. ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದರೂ ಮಾಡಿಲ್ಲ. ಆದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಎಸ್‌ಟಿ ಐತಿಹಾಸಿ ನಿರ್ಣಯ ಇದರಿಂದ ಬಡವರಿಗೆ ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಲಿದೆ. ಕೈಗಾರಿಕೋದ್ಯಮಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬಿಡಬೇಕು. ಅಭಿವೃದ್ಧಿಗೆ ಹಣವಿಲ್ಲದ ಕಾರಣ ಕಾಂಗ್ರೇಸ್ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ರಾಜ್ಯ ಸರ್ಕಾರ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಬೇಕು. ಮುಖ್ಯವಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಬಿಹಾರ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಎನ್‌ಡಿಎ ಕೂಟ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಯಾವುದೇ ಪ್ರಯೋಜವಿಲ್ಲ. ಸೂಲಿನ ಸೂಚನೆಯನ್ನು ಗಮನಿಸಿರುವ ಕಾಂಗ್ರೇಸ್‌ನವರು ಹತಾಶೆಯಿಂದ ಇವಿಎಂ ಯಂತ್ರಗಳನ್ನು ದೂರುತ್ತಿದ್ದಾರೆ. ಎಂದ ಅವರು, ಸಿದ್ರಾಮಯ್ಯ ತಪ್ಪು ಮಾಡದಿದ್ದಲ್ಲಿ ೧೪ ನೀವೇಶನ ಹಿಂದಿರುಗಿಸುತ್ತಿರಲಿಲ್ಲ. ಕುತಂತ್ರದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಅವರು ಅಪರಾಧಿ ಎಂಬುದು ಅವರ ಮನಸಾಕ್ಷಿಗೆ ಗೊತ್ತಿದೆ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧರ್ಮಸ್ಥಳ ಚಲೋಗೆ ಪಕ್ಷಾತೀತ ಕರೆ ನೀಡಲಾಗುತ್ತಿ. ಹಾಗಾಗಿ ರಾಜ್ಯದ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಮಂಜುನಾಥನ ಭಕ್ತರ ಭಾವನೆಗೆ ರಾಜ್ಯ ಸರ್ಕಾರ ಧಕ್ಕೆ ತಂದಿದೆ. ಅಪಪ್ರಚಾರ ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಷಡ್ಯಂತ್ರ ಮಾಡಿರುವವರು ಬೆಳಕಿಗೆ ಬರಬೇಕು. ಇದರಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಮಂಜುನಾಥನ ಹೆಸರಿನಲ್ಲಿ ರಾಜಕಾರಣ ಮಡಿದರೆ ಯಾರಿಗೂ ಒಳ್ಳೆಯದಾಗಲ್ಲ. ಸಮೀರ್ ಒದ್ದು ಒಳಗೆ ಹಾಕಿ ಸತ್ಯ ಬಯಲು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸೌಜನ್ಯ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟ. ಮರುತನಿಖೆಗೆ ಆದೇಶ ಮಾಡಲಿ ಎಂದು ಸಿಎಂಗೆ ಈ ಹಿಂದೆಯೇ ಆಗ್ರಹಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಠಿಸದೆ ಮರುತನಿಖೆಗೆ ಆದೇಶ ಮಾಡಿ. ಸುಪ್ರಿಂ ಕೋರ್ಟ್‌ಗೆ ಹೋಗಲು ಸಹಕಾರ ಮಾಡುತ್ತೇವೆ ಎಂದು ಸೌಜನ್ಯ ಕುಟುಂಬಕ್ಕೆ ತಿಳಿಸಿದ್ದೇವೆ. ರಾಜಕಾರಣ ಮಾಡಲು ಅವರ ಮನೆಗೆ ಹೋಗಿರಲಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ