ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭವಿಷ್ಯದ ನೀರಿನ ಸಂಕಷ್ಟ ತಪ್ಪಿಸಲು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ‘ನೀರಿದ್ದರೆ ನಾಳೆ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದೆ. ಈ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಮಹತ್ವ, ಅರಿವು ಮೂಡಿಸುವುದು, ಜಲಮೂಲಗಳ ಸಂರಕ್ಷಣೆ ಹಾಗೂ ನಾಗರಿಕರನ್ನೇ ನೀರಿನ ಉಳಿವಿನ ಪಾಲುದಾರರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ 16 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ 100ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಸೇರಿವೆ. ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ನಟ ವಸಿಷ್ಠ ಸಿಂಹ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಯೋಜನೆಯ ಪ್ರಮುಖ ಗುರಿ ಎಂದರೆ ಪ್ರಕೃತಿಯಿಂದ ಬಂದಿರುವ ಜಲಮೂಲಗಳನ್ನು ಸಂರಕ್ಷಿಸಿ, ನಮ್ಮ ಪೂರ್ವಜರು ನಿರ್ಮಿಸಿದ ಜಲಸಂಪತ್ತುಗಳನ್ನು ಕಾಪಾಡಿ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕುವುದು.