Wednesday, December 31, 2025

ಹೊಸ ವರುಷದ ಕಿಕ್‌ನಲ್ಲಿ ಪ್ರಜ್ಞೆ ತಪ್ಪಿದರೆ ಪೊಲೀಸ್ ಕಸ್ಟಡಿಯಲ್ಲಿ ವಿಶ್ರಾಂತಿ: ಪರಮೇಶ್ವರ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಮಿತಿಮೀರಿ ಮದ್ಯಪಾನ ಮಾಡಿ ರಸ್ತೆಯಲ್ಲಿ ಬಿದ್ದವರನ್ನು ಪೊಲೀಸರೇ ಮನೆಗೆ ತಲುಪಿಸುತ್ತಾರೆ ಎಂಬ ಸುದ್ದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತೆರೆ ಎಳೆದಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಕುಡಿದ ಪ್ರತಿಯೊಬ್ಬರನ್ನೂ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ಹೊತ್ತುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಅತಿಯಾದ ಮದ್ಯಸೇವನೆಯಿಂದ ನಡೆಯಲು ಅಸಾಧ್ಯವಾದ ಅಥವಾ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿರುವವರ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ 15 ವಿಶೇಷ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಅತಿಯಾಗಿ ಅಮಲೇರಿದವರನ್ನು ಪೊಲೀಸರು ಈ ಕೇಂದ್ರಗಳಿಗೆ ಕರೆದೊಯ್ಯಲಿದ್ದಾರೆ. ಈ ಕ್ರಮವು ವಿಶೇಷವಾಗಿ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ.

ಅಮಲು ಇಳಿದು ವ್ಯಕ್ತಿ ಸಹಜ ಸ್ಥಿತಿಗೆ ಬಂದ ನಂತರ, ಅವರ ವಿಳಾಸ ಪಡೆದು ಸುರಕ್ಷಿತವಾಗಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.

“ಪೊಲೀಸರು ಮನೆಗೆ ಬಿಡುತ್ತಾರೆ” ಎಂಬ ತಪ್ಪು ಕಲ್ಪನೆಯನ್ನು ಇಟ್ಟುಕೊಂಡು ಯಾರೂ ಈ ಸನ್ನಿವೇಶವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಚಿವರು ಎಚ್ಚರಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಇದು ಮದ್ಯಪಾನ ಮಾಡುವವರಿಗೆ ನೀಡುತ್ತಿರುವ ಸವಲತ್ತಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

error: Content is protected !!