ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮ ಹತ್ತಿರವಾಗುತ್ತಿದ್ದು, ಲಕ್ಷ್ಮೀ ಪೂಜೆಯ ಸಿದ್ಧತೆಗಳು ದೇಶಾದ್ಯಂತ ಜೋರಾಗಿದೆ. ಇದೇ ವೇಳೆ ಮದುವೆ ಸೀಜನ್ ಕೂಡ ಪ್ರಾರಂಭವಾಗಿರುವ ಕಾರಣ ಚಿನ್ನ ಮತ್ತು ಬೆಳ್ಳಿಯ ಖರೀದಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಈ ಸಮಯದಲ್ಲೇ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಇತಿಹಾಸದಲ್ಲೇ ಗರಿಷ್ಠ ಮಟ್ಟ ತಲುಪಿದ್ದು, ಸಾಮಾನ್ಯ ಜನರಿಗೆ ಬಂಗಾರ ಖರೀದಿಸುವುದು ಕನಸಿನ ಮಾತಾಗಿದೆ.
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಸುಮಾರು 65 ಶೇಕಡಾ ಏರಿಕೆಯಾಗಿದೆ. ಇತ್ತೀಚೆಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ಆಗಿದ್ದು, ಬೆಳ್ಳಿ ಪ್ರತಿ ಕಿಲೋಗ್ರಾಂಗೆ 1,60,000 ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರುವುದು, ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿರುವುದು, ಜೊತೆಗೆ ಅಮೆರಿಕದ ಟ್ರಂಪ್ ಸರ್ಕಾರದ ವಾಣಿಜ್ಯ ನೀತಿಗಳು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.
ತಜ್ಞರ ಅಂದಾಜು ಪ್ರಕಾರ, ಮುಂದಿನ ಕೆಲವು ತಿಂಗಳುಗಳಲ್ಲಿ ಚಿನ್ನದ ದರ 10 ಗ್ರಾಂಗೆ 1,35,000 ವರೆಗೆ ಏರಬಹುದಾದರೆ, ಬೆಳ್ಳಿಯ ದರ 1,75,000 ಕಿಲೋಗ್ರಾಂಗೆ ತಲುಪುವ ಸಾಧ್ಯತೆ ಇದೆ. ಇಳಿಕೆಯ ಸಾಧ್ಯತೆ ಅತ್ಯಲ್ಪವಾಗಿದ್ದು, ಕೇವಲ 10 ರಿಂದ 15 ಶೇಕಡಾ ಮಟ್ಟದಲ್ಲಿ ಮಾತ್ರ ಇಳಿಕೆ ಕಂಡುಬರುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ, ದೀಪಾವಳಿ ಮತ್ತು ಮದುವೆ ಸೀಜನ್‌ನ ಸಂಭ್ರಮದಲ್ಲಿರುವ ಜನರಿಗೆ ಈ ಬಾರಿ ಚಿನ್ನದ ಬೆಲೆ ಆಘಾತ ತಂದಂತಾಗಿದೆ. ಬೆಲೆ ಏರಿಕೆಯ ಈ ಸರಣಿಗೆ ಶೀಘ್ರದಲ್ಲೇ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸದಿರುವುದು ಸಾಮಾನ್ಯ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.