Sunday, December 21, 2025

ಅಕ್ಕನ ಸ್ಥಾನದಲ್ಲಿ ನಿಂತು ಹೇಳುತ್ತೇನೆ…ಕೀಳು ಮಟ್ಟದ ಮಾತು ನಿಲ್ಲಿಸಿ: ಪ್ರತಾಪ್- ಪ್ರದೀಪ್ ಗೆ ಲಕ್ಷ್ಮೀ ಹೆಬ್ಬಾಳಕರ್ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಬದಲಾವಣೆ ಎಐಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ನಾನು ಸೇರಿದಂತೆ ಎಲ್ಲರೂ ಪಕ್ಷ ಹೇಳಿದಂತೆ ಕೇಳುತ್ತೇವೆ‌. ಪಕ್ಷ ನನ್ನನ್ನು ಗುರುತಿಸಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೂ ಸಂತೋಷದಿಂದ ಕೇಳುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿ ಅವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ. ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರದ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ ಎಂದು ಹೇಳಿದರು.‌

ಪ್ರತಾಪ್ ಸಿಂಹ- ಪ್ರದೀಪ್ ಈಶ್ವರ್ ಕೀಳು ಮಟ್ಟದ ಮಾತು ನಿಲ್ಲಿಸಿ
ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್‌ ಸಿಂಹ ನಡುವಿನ ಮಾತಿನ ಸಮರಕ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಅಕ್ಕನ ಸ್ಥಾನದಲ್ಲಿ ನಿಂತು ಇಬ್ಬರಿಗೂ ಕಿವಿಮಾತು ಹೇಳುತ್ತೇನೆ. ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿದ್ದಾರೆ. ನಾವು ರೋಲ್ ಮಾಡೆಲ್ ಆಗಬೇಕೆ ಹೊರತು ನಾಚಿಕೆ ಆಗುವಂತೆ ವರ್ತಿಸಬಾರದು ಎಂದರು.‌

ನಿಮ್ಮ ಆಚಾರ ವಿಚಾರ ಭಾಷೆಯನ್ನು ಜನ ನೋಡುತ್ತಾರೆ. ನಿಮ್ಮ ತಂದೆ ತಾಯಿಯನ್ನು ಎಳೆಯುವುದು. ಸರಿಯಲ್ಲ, ಇಲ್ಲಿಗೆ ಬಿಟ್ಟುಬಿಡಿ. ಇಬ್ಬರೂ ಬುದ್ಧಿವಂತರಿದ್ದೀರಿ, ಸಾಕು ಇಲ್ಲಿಗೇ ಬಿಟ್ಟುಬಿಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿವಿ ಮಾತು ಹೇಳಿದರು.

error: Content is protected !!