ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸತೀಶ್ ಸೈಲ್ ಅವರು ದೀರ್ಘಕಾಲದಿಂದ ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಪರ ವಕೀಲರು ವೈದ್ಯಕೀಯ ಮಧ್ಯಂತರ ಜಾಮೀನು ಕೋರಿದರು. ಕೋರ್ಟ್ ವಿಚಾರಣೆ ನಡೆಸಿ, ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಏಳು ದಿನಗಳ ಕಾಲ ಜಾಮೀನು ನೀಡಲು ಒಪ್ಪಿಗೆ ನೀಡಿತು.
ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ (ಇಡಿ) ಸತೀಶ್ ಸೈಲ್ ಅವರನ್ನು ಬಂಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಇಸಿಐಆರ್ ದಾಖಲಿಸಿಕೊಂಡ ಇಡಿ, ತಮ್ಮ ತನಿಖೆಯ ಭಾಗವಾಗಿ ಆಗಸ್ಟ್ 13 ಮತ್ತು 14ರಂದು ಸತೀಶ್ ಸೈಲ್ ಅವರ ಕಾರವಾರ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ವೇಳೆ, ಅಧಿಕಾರಿಗಳು ₹13 ಕೋಟಿಗೂ ಹೆಚ್ಚು ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.