ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಮುಂದುವರೆದಿದ್ದು, ಇಂದು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ದೆಹಲಿಯ ಇಡಿ ಕಚೇರಿಗೆ ಹಾಜರಾಗಿದ್ದಾರೆ. ವಕೀಲರೊಂದಿಗೆ ಹಾಜರಾದ ಉತ್ತಪ್ಪ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹೇಳಿಕೆ ದಾಖಲಿಸುವ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಗಣ್ಯರಿಗೆ ಇಡಿ ಸಮನ್ಸ್ ನೀಡಲಾಗಿದೆ. ಇದೇ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23ರಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಸೆಪ್ಟೆಂಬರ್ 24ರಂದು ನಟ ಸೋನು ಸೂದ್ ವಿಚಾರಣೆಗೆ ಹಾಜರಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಪ್ರಕರಣದಲ್ಲಿ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜ್ರಾ, ಕ್ರಿಕೆಟಿಗ ಶಿಖರ್ ಧವನ್ ಮತ್ತು ಸುರೇಶ್ ರೈನಾ ಮುಂತಾದವರು ಮುಂಚಿತವಾಗಿ ಇಡಿ ತನಿಖೆ ಎದುರಿಸಿದ್ದರು.