Saturday, December 27, 2025

IMBD ಜನಪ್ರಿಯ ತಾರೆಯರ ಪಟ್ಟಿ ರಿಲೀಸ್: ಶೆಟ್ರ ಜತೆ ಕನಕವತಿಗೂ ಸ್ಥಾನ! ಫಸ್ಟ್ ಪ್ಲೇಸ್ ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಸಿನಿರಸಿಕರ ನೋಟ ಯಾವ ನಟ–ನಟಿಯರ ಮೇಲೆ ಹೆಚ್ಚು ನೆಟ್ಟಿದೆ ಎಂಬುದಕ್ಕೆ ಐಎಂಬಿಡಿ (IMDb) ಬಿಡುಗಡೆ ಮಾಡುವ ಜನಪ್ರಿಯತಾ ಪಟ್ಟಿ ಪ್ರಮುಖ ಅಳತೆಗೋಲು. 2025ರ ಟಾಪ್ 10 ಜನಪ್ರಿಯ ನಟ–ನಟಿಯರ ಪಟ್ಟಿಯನ್ನು ಐಎಂಬಿಡಿ ಪ್ರಕಟಿಸಿದ್ದು, ಈ ಬಾರಿ ಕನ್ನಡ ಸಿನಿರಂಗಕ್ಕೆ ವಿಶೇಷ ಹೆಮ್ಮೆ ತಂದಿದೆ. ನಟ–ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಈ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ದೇಶವ್ಯಾಪಿ ಗಮನ ಸೆಳೆದಿದ್ದಾರೆ.

‘ಕಾಂತಾರ’ ಹಾಗೂ ‘ಕಾಂತಾರ: ಎ ಲೆಜೆಂಡ್ ಚಾಪ್ಟರ್–1’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಗುರುತು ಮೂಡಿಸಿರುವ ರಿಷಬ್ ಶೆಟ್ಟಿ, ಈ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಇದೇ ಚಿತ್ರದಲ್ಲಿ ಕನಕವತಿ ಪಾತ್ರದಲ್ಲಿ ಗಮನಸೆಳೆದಿದ್ದ ನಟಿ ರುಕ್ಮಿಣಿ ವಸಂತ್, ರಿಷಬ್ ಶೆಟ್ಟಿಗಿಂತ ಒಂದು ಸ್ಥಾನ ಮುನ್ನಡೆದು 9ನೇ ಸ್ಥಾನ ಪಡೆದಿರುವುದು ಗಮನಾರ್ಹ.

ಈ ಪಟ್ಟಿಯ ಮೊದಲ ಸ್ಥಾನವನ್ನು ‘ಸೈಯಾರಾ’ ಚಿತ್ರದ ಮೂಲಕ ಸಂಚಲನ ಮೂಡಿಸಿದ ಅಹಾನ್ ಪಾಂಡೆ ಪಡೆದುಕೊಂಡಿದ್ದು, ಅವರ ಹಿಂದೆಯೇ ಅನೀತ್ ಪಡ್ಡಾ ಮತ್ತು ಅಮಿರ್ ಖಾನ್ ಸ್ಥಾನ ಪಡೆದಿದ್ದಾರೆ. ಇಶಾನ್ ಖಟ್ಟರ್, ಲಕ್ಷ್ಯ, ರಶ್ಮಿಕಾ ಮಂದಣ್ಣ, ಕಲ್ಯಾಣಿ ಪ್ರಿಯದರ್ಶನ್ ಹಾಗೂ ತೃಪ್ತಿ ದಿಮ್ರಿ ಕೂಡ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಎಂಬಿಡಿ ಪಟ್ಟಿ ಈ ಬಾರಿ ಕನ್ನಡ ಪ್ರತಿಭೆಗಳ ಜಾಗತಿಕ ಒಪ್ಪಿಗೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

error: Content is protected !!