Thursday, September 11, 2025

2026ರ ಮಾರ್ಚ್‌ ವೇಳೆ ‘ಪಿಎಂ ಕುಸುಮ್‌’ 2ನೇ ಹಂತದ ಯೋಜನೆ ಅನುಷ್ಠಾನ: ಕೇಂದ್ರ ಸಚಿವ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತರಿಗೆ ಸೌರ ವಿದ್ಯುತ್‌ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ʼಪಿಎಂ ಕುಸುಮ್‌ʼ 2ನೇ ಹಂತದ ಯೋಜನೆಯನ್ನು 2026ರ ಮಾರ್ಚ್‌ ವೇಳೆಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ರಾಜ್ಯ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿ, PM-KUSUM ಯೋಜನೆಗ ಬಹುತೇಕ ಎಲ್ಲ ರಾಜ್ಯಗಳಲ್ಲಿ ವೇಗ ಪಡೆದುಕೊಂಡಿದೆ ಹಾಗೂ ಮುಖ್ಯಮಂತ್ರಿಗಳಿಂದ ಹೆಚ್ಚುವರಿ ಹಂಚಿಕೆಗಳಿಗೆ ಬೇಡಿಕೆಯಿದೆ. ಹಾಗಾಗಿ ಪ್ರಸ್ತುತ ಹಂತ ಮುಗಿದ ಬಳಿಕ 2026ರ ಮಾರ್ಚ್ ಅಲ್ಲಿ 2ನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಸುಮಾರು 20 ಲಕ್ಷ ಕುಟುಂಬಗಳು ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಪ್ರಯೋಜನ ಪಡೆದಿವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಅನುಗುಣವಾಗಿ ರಾಜ್ಯಗಳು ಮತ್ತು ಡಿಸ್ಕಾಮ್‌ಗಳು ತ್ವರಿತವಾಗಿ ಒಪ್ಪಂದಗಳನ್ನು ಅಂತಿಮಗೊಳಿಸಬೇಕು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಸರಳ ಸುಂಕದ ಸಾಲ ವಿತರಿಸಬೇಕು ಎಂದು ಹೇಳಿದರು.

PM ಸೂರ್ಯಘರ್ ಯೋಜನೆಯಡಿ ಸುಮಾರು ಶೇ. 50ರಷ್ಟು ಫಲಾನುಭವಿಗಳು ಈಗಾಗಲೇ ಶೂನ್ಯ ವಿದ್ಯುತ್ ಬಿಲ್‌ ಪಡೆಯುತ್ತಿದ್ದಾರೆ. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಮುನ್ನಡೆಸುವಲ್ಲಿ ರಾಜ್ಯಗಳು ಗಮನಾರ್ಹ ಪ್ರಗತಿ, ಪ್ರಯತ್ನ ತೋರಿದ್ದು, ಜಾಗತಿಕವಾಗಿ ಭಾರತದ ನಾಯಕತ್ವವನ್ನು ಬಲಪಡಿಸುತ್ತಿದೆ ಎಂದರು.

ಭಾರತ ಈಗಾಗಲೇ 251.5 GW ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ಸಾಧಿಸಿದೆ. 2030ರ ವೇಳೆಗೆ ಇದ್ದ 500 GW ಗುರಿಯ ಶೇ.50ಕ್ಕಿಂತ ಹೆಚ್ಚು ಸಾಧನೆ ತೋರಿದೆ. ಭಾರತದ ಶುದ್ಧ ಇಂಧನ ಬೆಳವಣಿಗೆ ಮತ್ತು RE ವಲಯದಲ್ಲಿ ದೇಶೀಯ ಉತ್ಪಾದನೆ ಪರಿವರ್ತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಆಶಯಕ್ಕೆ ಪೂರಕವಾಗಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದರು.

ಭಾರತ ನಿಗದಿತ ಸಮಯಕ್ಕಿಂತ 5 ವರ್ಷಗಳ ಮೊದಲೇ ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ ಶೇ. 50ರಷ್ಟು ಗುರಿ ಸಾಧಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಅದಾಗ್ಯೂ ಉತ್ಪಾದನಾ ಸಾಮರ್ಥ್ಯ ಪರಿಣಾಮಕಾರಿ ಬಳಕೆಗೆ ಪೂರಕವಾಗಿರಬೇಕು. ಆಯಾ ರಾಜ್ಯಗಳು ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆ, ವಿದ್ಯುತ್ ಖರೀದಿ ಒಪ್ಪಂದ ಮತ್ತು ಭೂ ಹಂಚಿಕೆಗಳನ್ನು ಪಾರದರ್ಶಕವಾಗಿ ತ್ವರಿತಗೊಳಿಸಬೇಕು. ಸುಂಕ ಮತ್ತಷ್ಟು ಕಡಿಮೆಯಾಗುತ್ತವೆ ಎಂಬ ನಿರೀಕ್ಷೆಯಿಂದ ಖರೀದಿ ವಿಳಂಬ ಮಾಡುತ್ತಿದ್ದರೆ ನಾವು ದೊಡ್ಡ ಕೊಡುಗೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

GST ಶೇ. 5ಕ್ಕೆ ಇಳಿಕೆ
ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಸೇವೆಗಳ ಮೇಲಿನ GSTಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಈ ಕ್ರಮ ಸ್ವಾಗತಾರ್ಹವಾಗಿದೆ. ಇದು ಸೌರ, ಪವನ, ಜೈವಿಕ ಅನಿಲ ಮತ್ತು ತ್ಯಾಜ್ಯದಿಂದ ಉತ್ಪಾದಿಸಿದ ಇಂಧನವನ್ನು ಹೆಚ್ಚು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಎಂದು ಜೋಶಿ ಮಾಹಿತಿ ನೀಡಿದರು.

ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳಿಗಾಗಿ ₹ 24,000 ಕೋಟಿ ವೆಚ್ಚದಲ್ಲಿ ಹಾಕಿಕೊಂಡ ಪಿಎಲ್‌ಐ ಯೋಜನೆ ಯಶಸ್ಸು ತೋರಿದೆ. ಭಾರತ ಈಗ 100 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹಾಗೂ ₹ 50,000 ಕೋಟಿ ಹೂಡಿಕೆ ಮತ್ತು ಈ ಯೋಜನೆಯಡಿ 12,600ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಮಾಹಿತಿ ನೀಡಿದರು.

2028ಕ್ಕೆ ಸಂಪೂರ್ಣ ಸ್ವದೇಶಿ ನಿರ್ಮಿತ
ಭಾರತ 2028ರ ವೇಳೆಗೆ ಸಂಪೂರ್ಣ ಸ್ವದೇಶಿ ನಿರ್ಮಿತ ಸೌರ ಕೋಶಗಳನ್ನು ಅಳವಡಿಸುವ ಗುರಿಯತ್ತ ಸಾಗಿದೆ. ದೇಶೀಯ ವೇಫರ್‌, ಸೌರ ಫಲಕಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಮುಂದಡಿ ಇಟ್ಟಿದ್ದು, ಇದು ಸಂಪೂರ್ಣ ಸೌರ ಉತ್ಪಾದನಾ ಪರಿಸರಕ್ಕೆ ಉತ್ತೇಜನ ನೀಡುತ್ತದೆ. ಅಲ್ಲದೇ, ಸೌರ ಪರಿಕರಗಳ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡುವುದಲ್ಲದೆ ಯುವ ಕೈಗಳಿಗೆ ಹೆಚ್ಚು ಹೆಚ್ಚು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ