ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದು ಅವರ ವೈಯಕ್ತಿಕ ವಿಷಯ, ಅದರಲ್ಲಿ ಧರ್ಮವನ್ನು ಎಳೆಯುವ ಅಗತ್ಯವಿಲ್ಲ ಎಂದು ನಗರದ ಜಾಮಿಯಾ ಮಸೀದಿಯ ಮೌಲಾನಾ ಇಮ್ರಾನ್ ಮಕ್ಸೂದ್ ಸ್ಪಷ್ಟಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಲೇಖಕಿ ವಿರುದ್ಧ ಫತ್ವಾ ಹೊರಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಯಾವುದೇ ಫತ್ವಾ ಹೊರಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಮೌಲಾನಾ ಮಕ್ಸೂದ್, “ಫತ್ವಾ ಹೊರಡಿಸುವುದು ಸುಲಭದ ವಿಷಯವಲ್ಲ. ಅದಕ್ಕೆ ನಿಗದಿತ ನಿಯಮ, ಕ್ರಮ ಮತ್ತು ಅಗತ್ಯ ದಾಖಲೆಗಳಿರಬೇಕು. ಯಾರು ಬೇಕಾದವರೂ ತಮ್ಮ ಅಭಿಪ್ರಾಯ ಆಧರಿಸಿ ಫತ್ವಾ ಹೊರಡಿಸಲಾಗದು. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದೇನೂ ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ” ಎಂದು ಹೇಳಿದ್ದಾರೆ.
ಅವರು ಮುಂದುವರಿಸಿ, “ಪ್ರಧಾನಮಂತ್ರಿ ಪ್ರತಿ ವರ್ಷ ಅಜ್ಮೇರ್ ಶರೀಫ್‌ಗೆ ಚಾದರ ಕಳುಹಿಸುತ್ತಾರೆ. ಅದರಿಂದ ಅವರು ಮುಸ್ಲಿಂ ಆಗಿಬಿಡುವುದಿಲ್ಲ. ಅದೇ ರೀತಿ, ಬಿಜೆಪಿ ಶಾಸಕ ಗರುಡಾಚಾರ್ ಮಸೀದಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಅದರಿಂದ ಅವರು ಮುಸ್ಲಿಮರಾಗುವುದಿಲ್ಲ. ಅನೇಕ ಮುಸ್ಲಿಮರು ದೇವಾಲಯಗಳಿಗೆ ಹೋಗಿ ಪ್ರಾರ್ಥಿಸುತ್ತಾರೆ. ಅದರಿಂದ ಅವರು ಹಿಂದೂಗಳಾಗುವುದಿಲ್ಲ. ಇವೆಲ್ಲಾ ವೈಯಕ್ತಿಕ ನಂಬಿಕೆ ಮತ್ತು ಸಂಪ್ರದಾಯಗಳ ಭಾಗ” ಎಂದರು.
ನಮ್ಮ ದೇಶವು ಬಹುಧಾರ್ಮಿಕ ದೇಶವಾಗಿದ್ದು, ದೇವಸ್ಥಾನ, ಮಸೀದಿ, ಗುರುದ್ವಾರ ಹಾಗೂ ಚರ್ಚ್ ಎಲ್ಲವೂ ಸಮಾನವಾಗಿ ಅಸ್ತಿತ್ವದಲ್ಲಿವೆ. ಜನರು ತಮ್ಮ ತಮ್ಮ ನಂಬಿಕೆ ಪ್ರಕಾರ ನಡೆದುಕೊಳ್ಳುತ್ತಾರೆ ಎಂಬುದನ್ನು ಅವರು ಒತ್ತಿಹೇಳಿದರು.