ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಸೋಲಿನ ಬಳಿಕ, ನಾಯಕ ಸೂರ್ಯಕುಮಾರ್ ಯಾದವ್ ತಂಡದ ವೈಫಲ್ಯಕ್ಕೆ ನೇರ ಪ್ರತಿಕ್ರಿಯೆ ನೀಡಿದ್ದಾರೆ. ಪಂದ್ಯಾಂತ್ಯದ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಈ ಸೋಲು ತಂಡಕ್ಕೆ “ಎಚ್ಚರಿಕೆಯ ಸಂಕೇತ” ಎಂದು ಹೇಳಿದ್ದು, ಕೆಲವು ನಿರ್ಣಾಯಕ ಕ್ಷಣಗಳಲ್ಲಿ ಆಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದುದೇ ಫಲಿತಾಂಶವನ್ನು ಬದಲಾಯಿಸಿತು ಎಂದು ಸ್ಪಷ್ಟಪಡಿಸಿದರು.
ಬೌಲಿಂಗ್ ವಿಭಾಗ ಆರಂಭದಲ್ಲೇ ಹಿಂಜರಿದ ವಿಚಾರವನ್ನು ಅವರು ಒಪ್ಪಿಕೊಂಡಿದ್ದು, ಈ ಪಿಚ್‌ನಲ್ಲಿ ಸರಿಯಾದ ಲೆಂಗ್ತ್ ಪತ್ತೆಹಚ್ಚಲು ಬೌಲರ್‌ಗಳಿಗೆ ಹೆಚ್ಚು ಸಮಯ ಹಿಡಿಯಿತು ಎಂದು ತಿಳಿಸಿದರು. “ಮೊದಲ ಪ್ಲಾನ್ ಕೆಲಸ ಮಾಡದೇ ಹೋದಾಗ, ತಕ್ಷಣವೇ ಬದಲಾವಣೆ ಮಾಡಬೇಕಾಗಿತ್ತು. ಆದರೆ ನಾವು ಆ ಕ್ರಮ ಅನುಸರಿಸಲಿಲ್ಲ. ಇದು ನಮಗೆ ಮುಂದಿನ ಪಂದ್ಯಗಳಲ್ಲಿ ಬಹುಮುಖ್ಯ ಪಾಠ” ಎಂದು ಸೂರ್ಯ ಹೇಳಿದರು.
ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡುತ್ತಾ ಅವರು, ಟಾಪ್ ಆರ್ಡರ್ ನಿಷ್ಠುರವಾಗಿ ವಿಫಲವಾದುದನ್ನು ಕಟುವಾಗಿ ಟೀಕಿಸಿದರು. “ಗಿಲ್ ಮತ್ತು ನಾನು ತಂಡಕ್ಕೆ ಶಕ್ತಿಯುತ ಆರಂಭ ನೀಡಬೇಕಾಗಿತ್ತು. ನಾವು ಯಾವಾಗಲೂ ಅಭಿಷೇಕ್ ಶರ್ಮಾವನ್ನು ಮಾತ್ರ ಅವಲಂಬಿಸಲಾಗುವುದಿಲ್ಲ. ನಾನು, ಶುಭ್‌ಮನ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮುಂದೆ ಬರದೇ ಹೋದದ್ದು ಸೋಲಿನ ದೊಡ್ಡ ಕಾರಣ” ಎಂದು ತಿಳಿಸಿದ್ದಾರೆ.
ಅಕ್ಷರ್ ಪಟೇಲ್ ಕುರಿತು ಮಾತನಾಡಿದ ಸೂರ್ಯ, ಕಳೆದ ಪಂದ್ಯದಲ್ಲಿ ಅವರು ತೋರಿಸಿದ ಆಟವನ್ನು ಇಂದು ಮರುಕಳಿಸುವ ನಿರೀಕ್ಷೆ ತಂಡದಲ್ಲಿತ್ತು, ಆದರೆ ಯೋಜನೆಯಂತೆ ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳಿಂದ ಕಲಿಯುತ್ತೇವೆ ಎಂದು ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

